ಚಿಕ್ಕಬಳ್ಳಾಪುರ: ತಡರಾತ್ರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಭಾಗದಲ್ಲಿ ಅಪಾರ ಮಳೆಯಾಗಿದೆ. ಗುಡಿಬಂಡೆ ತಾಲೂಕಿನಲ್ಲಿ ಹಲವು ಕೆರೆಗಳು ಅಪಾಯ ಮಟ್ಟ ಮೀರಿ ಕೋಡಿ ಹರಿಯುತ್ತಿದೆ.
ಯಾವ ಮಾರ್ಗಗಳು ಬಂದ್?: ಗುಡಿಬಂಡೆಯಿಂದ ಹಂಪಸಂದ್ರ ಬಾಗೇಪಲ್ಲಿ ಹಾಗೂ ಗುಡಿಬಂಡೆಯಿಂದ ಪೇರೇಸಂದ್ರ ಮಾರ್ಗ, ಸೋಮೇನಹಳ್ಳಿಯಿಂದ ಕಮ್ಮಡಿಕೆ, ಗುಡಿಬಂಡೆಯಿಂದ ಲಕ್ಕೇನಹಳ್ಳಿ ಮಾರ್ಗ, ರಾಮಪಟ್ಟಣದಿಂದ ನವಿಲುಗುರ್ಕಿ ಮಾರ್ಗ, ಗುಡಿಬಂಡೆ ಅಮಾನಿ ಭೈರಸಾಗರ ಮಾರ್ಗಗಳಲ್ಲಿ ರಸ್ತೆಯಲ್ಲೇ ಅಪಾಯ ಮಟ್ಟ ಮೀರಿ ಕೋಡಿ ನೀರು ಹರಿಯುತ್ತಿರುವುದರಿಂದ ಜಲದಿಗ್ಬಂಧನವಾಗಿದೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ. ಬಾಗೇಪಲ್ಲಿಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಪಟ್ಟಣದ ಟಿ.ಬಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಕಾರೊಂದು ಜಲಾವೃತವಾಗಿ ಅಂಡರ್ ಪಾಸ್‌ನಲ್ಲೇ ಕೆಟ್ಟು ನಿಂತಿದೆ. ಬಾಗೇಪಲ್ಲಿ-ಪುಟ್ಟಪರ್ತಿ ಮಾರ್ಗದಲ್ಲಿ ಕುಶಾವತಿ ಮೈದುಂಬಿ ಹರಿಯುತ್ತಿದ್ದು, ಪುಟ್ಟಪರ್ತಿ ಮಾರ್ಗದ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಭಾರಿ ಮಳೆ: ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣ ಜಲಾವೃತ