ಚಿಕ್ಕಬಳ್ಳಾಪುರ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಸಮೀಪ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಕೋಟಹಳ್ಳಿ ಗ್ರಾಮದ ರಮೇಶ್ (25) ಮೃತ ವ್ಯಕ್ತಿ. ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗಮನಿಸದ ರಮೇಶ್, ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ.
ಇನ್ನು ರಮೇಶ್ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.