ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ನೂತನ ಮಿನಿ ವಿಧಾನಸೌಧ ಉದ್ಘಾಟನಾ ಸಮಾರಂಭವನ್ನು ಕಂದಾಯ ಸಚಿವ ಆರ್.ಅಶೋಕ್ ನೆರವೇರಿಸಿದರು.
ದೇಶವ್ಯಾಪ್ತಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಹಿನ್ನೆಲೆ ಸಚಿವರು ಉತ್ತರಿಸಿದ್ದು, ನಾಳೆ ನಡೆಯಲಿರುವ ಮುಷ್ಕರಕ್ಕೆ ಕೆಲವು ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ನಾಳೆಯ ಮುಷ್ಕರ ಯಶಸ್ವಿಯಾಗಲ್ಲ. ಬಂದ್, ಪ್ರತಿಭಟನೆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಂಕ್ರಾಂತಿ ನಂತರ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ನಾಯಕರ ಜೊತೆ ಮಾತನಾಡಿ ಆದಷ್ಟು ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ಮಾತು ಕೊಟ್ಟಂತೆ ಎಲ್ಲರೂ ಸಚಿವರಾಗುತ್ತಾರೆ ಎಂದು ತಿಳಿಸಿದರು.
ಇನ್ನು ಮಿನಿ ವಿಧಾನಸೌಧ ನಿರ್ಮಾಣದಿಂದ ತಾಲೂಕಿನ ಜನತೆಗೆ ಅಲೆದಾಡುವುದು ತಪ್ಪುತ್ತದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಶ್ರಮವಹಿಸಬೇಕಾಗಿದೆ ಎಂದರು.
15.5 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಹಾಗೂ 7.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ಮಾಣ ಮಾಡಿಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ, ಶಾಸಕ ಶಿವಶಂಕರ್ ರೆಡ್ಡಿ, ತಾಲೂಕು ಪಂಚಾಯತಿ ಅಧ್ಯಕ್ಷ ಲೋಕೇಶ್ ಸೇರಿದಂತೆ ಜಿಲ್ಲಾಧಿಕಾರಿ ಆರ್.ಲತಾ ಭಾಗಿಯಾಗಿದ್ದರು.