ಚಿಕ್ಕಬಳ್ಳಾಪುರ : ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳಿಗೆ ಮದ್ಯ ಕುಡಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿರುವ ಅಮಾನವೀಯ ಘಟನೆ ನೆರೆಯ ಆಂಧ್ರ ಪ್ರದೇಶದದ ತಿರುಪತಿ ಬಳಿಯ ವಿಜೀಪುರ ಗ್ರಾಮದಲ್ಲಿ ನಡೆದಿದೆ.
30 ವರ್ಷದ ಮಹಿಳೆಯನ್ನು ಆಕೆಯ ಚಿಕ್ಕಪ್ಪ 50 ವರ್ಷದ ಬಾಬಾ ಫಕ್ರುದ್ದೀನ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಮೂಲತಃ ವಿಜೀಪುರ ಗ್ರಾಮದವಳಾದ ಮಹಿಳೆ, ಮನೆ ಕೆಲಸ ಮಾಡಿಕೊಂಡು ಕುವೈತ್‍ನಲ್ಲಿದ್ದಳು. ಕೊರೊನಾ ಹಿನ್ನೆಲೆ, ಕೆಲ ತಿಂಗಳ ಹಿಂದೆ ತವರಿಗೆ ಹಿಂದಿರುಗಿದ್ದಳು. ಮತ್ತೆ ಕುವೈತ್‍ಗೆ ಕೆಲಸಕ್ಕೆ ಹೋಗಲು ಮುಂದಾಗಿದ್ದ ಮಹಿಳೆ, ಪಾಸ್‍ಪೋರ್ಟ್ ಸೇರಿದಂತೆ ದಾಖಲೆಗಳನ್ನು ಮಾಡಿಸಬೇಕು ಎಂದು ಚಿಕ್ಕಪ್ಪ ಬಾಬಾ ಫಕ್ರುದ್ದೀನ್ ಬಳಿ 5 ಸಾವಿರ ರೂ. ಹಣ ಕೇಳಿದ್ದಳು.
ಆರೋಪಿ ಬಾಬಾ ಫಕ್ರುದ್ದೀನ್ ಟೊಮ್ಯಾಟೊ ವ್ಯಾಪಾರಿಯಾಗಿದ್ದು, ತಿರುಪತಿಯಲ್ಲಿ ವಾಸವಾಗಿದ್ದ. ಈತನಿಗೆ ಇಬ್ಬರು ಹೆಂಡತಿಯರಿದ್ದು, ವಿಜೀಪುರ ಗ್ರಾಮದ ಮಹಿಳೆಯ ಚಿಕ್ಕಮ್ಮಳನ್ನೇ ಈತ ಮದುವೆಯಾಗಿದ್ದ. ಆಗಾಗ ವಿಜೀಪುರಕ್ಕೆ ಹೋಗಿ ಬರುತ್ತಿದ್ದ ಬಾಬಾ ಫಕ್ರುದ್ದೀನ್, ಕುವೈತ್‍ನಿಂದ ವಾಪಾಸ್ಸಾಗಿದ್ದ ಸುಂದರಿಯಾಗಿದ್ದ ತನ್ನ ಅಣ್ಣನ ಮಗಳ ಮೇಲೆಯೇ ಕಣ್ಣು ಹಾಕಿದ್ದ.
ಮಹಿಳೆ 5 ಸಾವಿರ ರೂ. ಹಣ ಕೇಳಿದ ಕೂಡಲೇ, ಕೊಡುತ್ತೇನೆ ಬಾ ಅಂತಾ ಅಕ್ಟೋಬರ್ 4 ರಂದು ಆಕೆಯನ್ನು ತಿರುಪತಿಗೆ ಕರೆಸಿಕೊಂಡಿದ್ದ. ಅಲ್ಲಿ ನನ್ನ ಬಳಿ ಹಣ ಇಲ್ಲ. ಟೊಮ್ಯಾಟೊ ಮಾರಿದ ಹಣವನ್ನು ನನ್ನ ಸ್ನೇಹಿತ, ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಕೊಡುತ್ತಾನೆ. ಬಾ ತಗೊಂಡು ಬರೋಣ ಎಂದು ಹೇಳಿ ಬಸ್ ಮೂಲಕ ಮಹಿಳೆಯನ್ನು ಪೆನುಗೊಂಡಾಗೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿಗೆ ಹೋದ ಮೇಲೆ ಸ್ನೇಹಿತ ಬರಲಿಲ್ಲ, ನಾಳೆ ಸಿಗುತ್ತಾನೆ. ದರ್ಗಾಗೆ ಹೋಗಿ ಬಂದು ಇವತ್ತು ಇಲ್ಲಿ ಲಾಡ್ಜ್ನಲ್ಲಿ ಉಳಿಯೋಣ ಎಂದು ರೂಮ್ ಮಾಡಿ ಇಬ್ಬರು ತಂಗಿದ್ದರು. ಆದರೆ, ಅಂದು ರಾತ್ರಿ ಮಗಳ ಸಮಾನಳಾದ ಮಹಿಳೆಗೆ ಮದ್ಯ ಕುಡಿಸಿ, ಆಕೆಯ ಮೇಲೆ ಬಾಬಾ ಫಕ್ರುದ್ದೀನ್ ಅತ್ಯಾಚಾರ ಮಾಡಿದ್ದಾನೆ.
ಈ ವೇಳೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ಗಲಾಟೆ ಮಾಡಿದ್ದಳು. ಆದರೆ, ಮತ್ತೊಂದು ಕಥೆ ಕಟ್ಟಿದ ಆರೋಪಿ ಬಾಬಾ ಫಕ್ರುದ್ದೀನ್, ಸ್ನೇಹಿತ ಹಿಂದೂಪುರದ ಪಾವಗಡದಲ್ಲಿ ಇದ್ದಾನೆ ಎಂದು ಹೇಳಿ, ಮರುದಿನ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದ. ಕೊನೆಗೆ ಅಕ್ಟೋಬರ್ 6 ರಂದು ಬಾಗೇಪಲ್ಲಿಯ ಕಾರಕೂರು ಬಳಿ ಬಂದು, ನಿರ್ಮಾಣ ಹಂತದ ಕಟ್ಟದಲ್ಲಿ ಮತ್ತೆ ಮದ್ಯ ಕುಡಿಸಿ ಅಕೆಯ ಮೇಲೆ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಅಕ್ಟೋಬರ್ 7 ರಂದು ಬಾಗೇಪಲ್ಲಿ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಕೊಲೆಯಾದ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ, ಅದನ್ನು ಗಮನಿಸಿದ ಮಹಿಳೆಯ ಸಂಬಂಧಿಯೊಬ್ಬರು, ಆಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಆಕೆಯ ಮೊಬೈಲ್ ಕರೆ ಮತ್ತು ಸಂಬಂಧಿಕರ ಮಾಹಿತಿ ಮೇರೆಗೆ ಮೃತಳ ಊರಲ್ಲೇ, ಎದುರು ಮನೆಯಲ್ಲಿದ್ದ ಆರೋಪಿ ಬಾಬಾ ಫಕ್ರುದ್ದೀನ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತನ್ನ ಕೃತ್ಯದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಬಾ ಫಕ್ರುದ್ದೀನ್‍ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.