ಗುಡಿಬಂಡೆ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಜತಾಂತ್ರಿಕತೆಯಿಂದ ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ಜಿಲ್ಲಾ ಮುಖಂಡ ಜಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕರ್ನಾಟಕ್ಕಾಗಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೋದಿಯವರು ಪ್ರಧಾನಿಯಾದಾಗಿನಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ವಿರೋಧಿಗಳು ಮಾತ್ರ ದೇಶ ಸುತ್ತುವ ಪ್ರಧಾನಿ ಜನವಿರೋಧಿ ಸರ್ಕಾರ ಎಂದು ಟೀಕಿಸುತ್ತಾರೆ. ಆದರೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಮೋದಿಯವರ ರಾಜಕೀಯ ಚಾಣಾಕ್ಷತನದಿಂದ ಎಲ್ಲಾ ದೇಶಗಳ ನಡುವೆ ಉತ್ತಮ ಬಾಂಧವ್ಯವನ್ನು ಹೊಂದಿ ವಿರೋಧಿ ದೇಶಗಳಿಗೂ ಕೂಡ ನಡುಕ ಹುಟ್ಟಿಸುತ್ತಿದ್ದಾರೆ. ಇಂದು ದೇಶದ ಅಭಿವೃದ್ದಿಗೆ ಮಾರಕವಾದ ಡ್ರಗ್ಸ್ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಡ್ರಗ್ಸ್ ಮುಕ್ತ ಕರ್ನಾಟಕ್ಕಾಗಿ ಅಭಿಯಾನ ಹಾಗೂ ನಶೆ ಮುಕ್ತ ಜೀವನ ಸುಖಮಯ ಜೀವನ ಎಂಬ ಘೋಷಣೆಯೊಂದಿಗೆ ಜಾಗೃತಿ ಜಾಥ ನಡೆಸಿ, ತಾಲೂಕು ಕಚೇರಿ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞಾ ವಿಧಿಯನ್ನು ಪಕ್ಷದ ತಾಲೂಕು ಅಧ್ಯಕ್ಷ ಗಂಗರೆಡ್ಡಿ ಬೋಧಿಸಿದರು.