ಗುಡಿಬಂಡೆ(ಚಿಕ್ಕಬಳ್ಳಾಪುರ) : ಅಪ್ರಾಪ್ತೆಗೆ ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಸಂದೇಶ, ಫೋಟೋಗಳನ್ನು ರವಾನಿಸಿದ ಆರೋಪದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆತನ ಸ್ನೇಹಿತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕಮ್ಮಗುಟ್ಟಹಳ್ಳಿಯ ಗ್ರಾಪಂ ಸದಸ್ಯ ರಾಮಪಟ್ನ ಗ್ರಾಮದ ಶ್ರೀನಿವಾಸ ಮತ್ತು ಆತನಿಗೆ ಸಾಥ್ ನೀಡಿದ ಅದೇ ಗ್ರಾಮದ ಕೇಶವ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇವರು ಬಾಲಕಿಯ ಮೊಬೈಲ್‌ಗೆ ಅಶ್ಲೀಲ ಸಂದೇಶ, ಫೋಟೋ ಮತ್ತು ವಾಯ್ಸ್ ಮೆಸೇಜ್‌ಗಳನ್ನು ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯ ತಾಯಿ ಮಗಳಿಗೆ ಆನ್‌ಲೈನ್ ತರಗತಿಗೆ ಉಪಯೋಗಿಸಲು ಮೊಬೈಲ್ ನೀಡಿದ್ದರು. ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಬಾಲಕಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಈ ಮೊಬೈಲ್‌ಗೆ ಗ್ರಾಪಂ ಸದಸ್ಯ ಶ್ರೀನಿವಾಸ್ ಅಶ್ಲೀಲ ಸಂದೇಶ, ಫೋಟೋಗಳು ಹಾಗೂ ವಾಯ್ಸ್ ಮೆಸೇಜುಗಳನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.
ಬಾಲಕಿ ಮೊಬೈಲ್ ನಂಬರ್ ಆರೋಪಿಗಳಿಗೆ ಸಿಕ್ಕಿದ್ದು ಹೇಗೆ?
ಗ್ರಾಪಂ ಸದಸ್ಯ ಶ್ರೀನಿವಾಸ್ ಕೆನರಾ ಬ್ಯಾಂಕ್‌ನ ʼಬ್ಯಾಂಕ್ ಮಿತ್ರʼ ಕೆಲಸ ಕೂಡ ಮಾಡುತ್ತಿದ್ದ. ಬಾಲಕಿಯ ಖಾತೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ವರ್ಗಾವಣೆ ಆಗಿತ್ತು. ಆ ಹಣವನ್ನು ಡ್ರಾ ಮಾಡಲು ಆರೋಪಿ ಆಕೆಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದುಕೊಂಡಿದ್ದ.
ಅದೇ ಮೊಬೈಲ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಂಡು ಬಾಲಕಿಗೆ ಕರೆ ಮಾಡಿ ಶ್ರೀನಿವಾಸ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದರಿಂದ ಬಾಲಕಿಯ ಆನ್‌ಲೈನ್ ತರಗತಿಗೆ ತೊಂದರೆಯಾಗುತ್ತಿತ್ತು. ಈತನಿಗೆ ಸ್ನೇಹಿತ ಕೇಶವ ಎಂಬಾತ ಸಾಥ್ ನೀಡುತ್ತಿದ್ದ. ಆರೋಪಿಗಳು ಜುಲೈ 8ರಂದು ಸಂಜೆ 7 ರಿಂದ 9 ಗಂಟೆ ಸಮಯದಲ್ಲಿ ಬಾಲಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.