ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಕೆಜಿಎನ್ ಮುಖ್ಯ ರಸ್ತೆಯ ಉಮರ್ ಮಸೀದಿ ಪಕ್ಕದಲ್ಲಿರುವ ರಸ್ತೆ ಅಗೆದು ಜಲ್ಲಿ ಕಲ್ಲುಗಳು ಹಾಕಿ ಮೂರು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ನಿವಾಸಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾರ್ವಜನಿಕರು ಮನೆಗಳಿಂದ ವಾಹನಗಳನ್ನು ತೆಗೆಯಲು ಸಾಧ್ಯವಾಗದೆ ಸುಮಾರು ದಿನ ವಾಹನಗಳನ್ನು ಉಪಯೋಗಿಸುವುದನ್ನೇ ತ್ಯಜಿಸಿದ್ದರು. ಮನೆಗಳ ಮುಂದೆ 3 ತಿಂಗಳಿನಿಂದ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದರೆ ವಾಸಿಸುವುದಾದರೂ ಹೇಗೆ ಎಂದು ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನಾಗರಿಕರು ಪ್ರಶ್ನೆ ಮಾಡಿದ್ದಾರೆ.
ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡುವಾಗ ಗುಣಮಟ್ಟ ಹಾಗೂ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಬೇಕು, ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದಿರುವ ಸಾರ್ವಜನಿಕರು, ಉಗ್ರ ಪ್ರತಿಭಟನೆ ಮಾಡುವ ಮುಂಚೆ ಎಚ್ಚೆತ್ತು ಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ.