ಬಾಗೇಪಲ್ಲಿ: ದಿನದಿಂದ ದಿನಕ್ಕೆ ಬಾಗೇಪಲ್ಲಿ ನಗರದಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ.
ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಶಾಪಿಂಗ್ ಮಾಲ್, ಚಿತ್ರಮಂದಿರ ಬಂದ್ ಮಾಡುವಂತೆ ಸೂಚಿಸಿದೆ. ಅಲ್ಲದೇ ಸಭೆ-ಸಮಾರಂಭಗಳಿಗೆ ಹೇರಿರುವ ನಿರ್ಬಂಧ ಗುರುವಾರಕ್ಕೆ ಆರು ದಿನ ಪೂರೈಸಿದೆ. ಹೀಗಾಗಿ ದಿನದಿಂದ ದಿನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ ಹಾಗೂ ಕೆಎಸ್ಆರ್ಟಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಟಿಲಗೊಳಿಸುತ್ತಿದೆ. ಜನರು ಆತಂಕಕ್ಕೆ ಒಳಗಾಗುತ್ತಿದ್ದು, ಇದರಿಂದ ಜನ ಮನೆಯಿಂದ ಹೊರಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ರಸ್ತೆ, ಪಾರ್ಕ್, ಮೈದಾನ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಜನಸಂಖ್ಯೆ ತೀರಾ ಕಡಿಮೆಯಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೆಎಸ್ಆರ್ಟಿಸಿ ಬಸ್‍ಗಳ ಸಂಚಾರವನ್ನು ಕಡಿತಗೊಳಿಸಿದೆ.
ಇನ್ನು ಆಟೋ, ಕ್ಯಾಬ್ ಚಾಲಕರು ಗ್ರಾಹಕರಿಲ್ಲದೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ದೃಶ್ಯಗಳು ಕಂಡು ಬಂದವು. ಸಾಮಾನ್ಯ ದಿನಗಳಲ್ಲಿ ಒಬ್ಬ ಆಟೋ ಚಾಲಕ ಸುಮಾರು 800 ರಿಂದ 1 ಸಾವಿರ ರೂ. ವರೆಗೆ ಆದಾಯ ಗಳಿಸುತ್ತಿದ್ದವರು, ಇದೀಗ ದಿನಕ್ಕೆ ಕೇವಲ 250 ರಿಂದ 300 ರೂ. ಗಳಿಸುವಂತಾಗಿದೆ.
ಬಸ್ ನಿಲ್ದಾಣ ಬಣಬಣ...
ಪ್ರಯಾಣಿಕರಿಂದ ತುಂಬಿಕೊಂಡು ಸದಾ ಚಟುವಟಿಕೆಯಿಂದ ಇರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಾಗೇಪಲ್ಲಿ ತಾಲೂಕು ಘಟಕ ನಿಲ್ದಾಣ, ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಇದರಿಂದ ಬಸ್ ನಿಲ್ದಾಣದಲ್ಲಿದ್ದ ಅಂಗಡಿ, ಹೋಟೆಲ್ಗಳು ಸೇರಿದಂತೆ ಮತ್ತಿತರ ಸಣ್ಣಪುಟ್ಟ ವ್ಯಾಪಾರಗಳು ನೆಲಕಚ್ಚಿವೆ.