ಚಿಕ್ಕಬಳ್ಳಾಪುರ: ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಇನ್ಮುಂದೆ ಮುಕ್ತಗೊಳಿಸಲಾಗಿದೆ. ಆನ್ ಲೈನ್, ಆಫ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ. ವಿಶ್ವವಿಖ್ಯಾತ ಪ್ರವಾಸಿತಾಣವಾದ ನಂದಿಬೆಟ್ಟಕ್ಕೆ ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಈವರೆಗೆ ವಾರಾಂತ್ಯದ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧವನ್ನು ಬರುವ ವಾರಾಂತ್ಯದ ದಿನಗಳಿಗೆ ಸಡಿಲಿಕೆ ಮಾಡಿ ಇಂದಿನಿಂದ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ.
ಟಿಕೆಟ್ ಬುಕ್ಕಿಂಗ್ ಹೇಗೆ?: ಒಂದು ದಿನ ಮುಂಚಿತವಾಗಿ ಸಂಜೆ 6:00ಗಂಟೆ ಒಳಗೆ ಟಿಕೇಟ್ನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬಹುದಾಗಿದೆ. ಆಫ್ ಲೈನ್ ಟಿಕೆಟ್ ಪಡೆಯುವವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ನಲ್ಲಿ ಪಡೆಯಬಹುದು. ಆನ್ಲೈನ್ ಬುಕ್ಕಿಂಗ್ ಮಾಡುವವರು https://booking.kstdc.co/cre/index.php?id_category=114&controller=category& ವಿಳಾಸವನ್ನು ಸಂಪರ್ಕಿಸಬಹುದು.
ನಿಲುಗಡೆಯನುಸಾರ ವಾಹನಗಳ ಪ್ರವೇಶಕ್ಕೆ ಅವಕಾಶ: ನಂದಿ ಗಿರಿಧಾಮದ ಮೇಲ್ಭಾಗದಲ್ಲಿ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್ಸು ಸೇರಿದಂತೆ 300 ಲಘು (ಪೋರ್ ವ್ಹೀಲರ್) ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು. ಮೇಲ್ಭಾಗಕ್ಕೆ ಚಲಿಸಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್ ಗಳನ್ನು ವಿತರಿಸಿ, ನಂದಿಗಿರಿಧಾಮ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ.
ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ದ್ವಿಚಕ್ರ ವಾಹನದಲ್ಲಿ ಬರುವ ಒಬ್ಬ ಸವಾರನಿಗೆ 50 ರೂ. ಇಬ್ಬರು ಸವಾರರ ವಾಹನಕ್ಕೆ 70 ರೂ, ನಾಲ್ಕು ಚಕ್ರದ ಎಲ್.ಎಂ.ವಿ ಲಘು ವಾಹನಗಳಿಗೆ 125 ರೂ.ಗಳು, ನಾಲ್ಕು ಚಕ್ರದ ಎಚ್.ಜಿ.ವಿ ವಾಹನಗಳಿಗೆ 150 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮಳೆಗಾಲಕ್ಕೂ ಮೊದಲೇ ಕೊಡಗಿನಲ್ಲಿ ಗುಡುಗು ಸಹಿತ ಆರ್ಭಟಿಸಿದ ಮಳೆ