ಚಿಕ್ಕಬಳ್ಳಾಪುರ: ಕೊರೊನಾ ಕಾಟದ ಜೊತೆಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯೂ ಹೆಚ್ಚಾಗಿದ್ದು, ಬೋರ್‌ವೆಲ್ ಕೊರೆಸುವ ಕಾರ್ಯಕ್ರಮಕ್ಕೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಚಾಲನೆ ನೀಡಿದ್ದು, ಸನ್ಮಾನ ಮಾಡುವ ವೇಳೆ ಹೂವಿನ ಹಾರ ಹಾಗೂ ಶಾಲು ಹಾಕುವುದನ್ನು ತಿರಸ್ಕರಿಸಿ ದೂರದಿಂದಲೇ ಸನ್ಮಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದೂರದಿಂದಲೇ ಮಾತುಕತೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಬಹುದು. ಇದಕ್ಕೆ ನಾವೆಲ್ಲಾ ಸಹಕರಿಸಬೇಕು. ಇಲ್ಲವಾದರೆ ಮಾಧ್ಯಮಗಳು ''ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮುನಿಯಪ್ಪ'' ಎಂದು ಬರೆಯುತ್ತಾರೆಂದು ಜನತೆಗೆ ಸಲಹೆ ನೀಡಿ ನಗು ಮುಖದಿಂದ ಹೊರಟರು.
ಇನ್ನು ಶಾಸಕರು ಹಾಗೂ ಮಾಜಿ ಸಂಸದರು ಎಷ್ಟೇ ಹೇಳಿದರೂ ಸಾರ್ವಜನಿಕರು ಮಾತ್ರ ಗುಂಪು ಗುಂಪಾಗಿ ನಿಂತುಕೊಂಡೇ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.