ಚಿಂತಾಮಣಿ (ಚಿಕ್ಕಬಳ್ಳಾಪುರ): ಮಳೆಯಿಂದ ಮನೆ ಕುಸಿದು ತಂದೆ ಮಗ ಮೃತಪಟ್ಟ ಕೈವಾರ ಹೋಬಳಿಯ ವೈಜಕೂರು ಗ್ರಾಮಕ್ಕೆ ಶಾಸಕ ಎಂ.ಕೃಷ್ಣಾರೆಡ್ಡಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತಾನಾಡಿದ ಅವರು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಮಳೆಯಿಂದ ಮನೆ ಕುಸಿತಗೊಂಡು ಸುತ್ತಮುತ್ತಲಿನ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ ನರೇಗಾ ಯೋಜನೆ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಜೊತೆಗೆ ವೈಯಕ್ತಿಕವಾಗಿ ಮೃತರ ಕುಟುಂಬಸ್ಥರಿಗೆ 50 ಸಾವಿರ ರೂ. ಸಹಾಯಧನ ನೀಡಿದರು. ಶಾಸಕರೊಂದಿಗೆ ತಹಶೀಲ್ದಾರ್ ಹನುಮಂತಪ್ಪ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಹಾಗೂ ಪಿಡಿಒ ಇದ್ದರು.
ಕಳೆದೊಂದು ವಾರದಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಚಪ್ಪಡಿ ಕಲ್ಲುಗಳ ಮನೆ ಕುಸಿದು ಮನೆಯಲ್ಲಿದ್ದ ಪೋಸ್ಟ್ ಆಫೀಸ್ ಉದ್ಯೋಗಿ ರವಿಕುಮಾರ್ (35) ಮತ್ತು ಅವರ ಮಗ ರಾಹುಲ್ (9) ಮೃತಪಟ್ಟಿದ್ದಾರೆ.