ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ಮುಸ್ಲಿಂ ಫೋರಂ ಕಮಿಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ 5,000 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಘೋಷಣೆ ಕೋಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಶಿವಶಂಕರ್ ರೆಡ್ಡಿ, ಸಿಪಿಎಂ ಮುಖಂಡ ಶ್ರೀರಾಮ್ ರೆಡ್ಡಿ, ಕಾಂಗ್ರೆಸ್ ಮುಖಂಡ ಅಂಜಿನಪ್ಪ, ಜೆಡಿಎಸ್ ಮುಖಂಡ ರಾಧಾಕೃಷ್ಣ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನಾಕಾರರಿಗೆ ಸಾಥ್ ನೀಡಿದರು.
ಈ ವೇಳೆ ಮಂಗಳೂರು ಗೋಲಿಬಾರ್ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುವವರ ಮೇಲೆ ಗೋಲಿಬಾರ್ ಮಾಡಿದ್ರೆ ಹೇಗೆ? ಮೊದಲು ಮನುಷ್ಯರಾಗಿ ಬದುಕುವುದನ್ನು ಕಲಿಯಿರಿ. ಎರಡು ಅಮಾಯಕರ ಜೀವಗಳು ಬಲಿಯಾದ ಬಗ್ಗೆ ಬೇಸರವಿದೆ. ರಾಜ್ಯ ಸರ್ಕಾರ ಬಹುಮತ ಪಡೆದು ಅಧಿಕಾರ ಹಿಡಿದಿದ್ದು ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ದೇಶದ ಬಾವುಟವನ್ನು ಬೇರೆಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪವಾಗಿದೆ. ನಮ್ಮ ದೇಶ ಜರ್ಮನಿ ಕಡೆ ಹೋಗುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಹಾಗೂ ಸಿಪಿಎಂ ಮುಖಂಡ ಶ್ರೀರಾಮರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನ ಹಾಗೂ ದೇಶ ವಿರೋಧ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದವರು ಉಳಿಯಬೇಕು ಎಂದು ಹೇಳಬೇಕೇ ಹೊರತು ಕೇವಲ ಹಿಂದೂ ಧರ್ಮ ಉಳಿಯಬೇಕು ಎನ್ನುವವರು ದೇಶಭಕ್ತರಲ್ಲ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಶಾಂತಿಯುತ ಪ್ರತಿಭಟನೆ ನಡೆಸಿದಕ್ಕಾಗಿ ಐಜಿ ಶರತ್ ಚಂದ್ರ ಹಾಗೂ ಎಸ್ಪಿ ಅಭಿನವ್ ಖರೆ ಪ್ರತಿಭಟನಾಕಾರರಿಗೆ ಧನ್ಯವಾದ ತಿಳಿಸಿದರು.