ಚಿಕ್ಕಬಳ್ಳಾಪುರ: ಹೆಂಡತಿಯ ಪ್ರಿಯಕರನಿಂದ ಗಂಡನ ಕೊಲೆ ನಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಅಗ್ರಹಾರ ನಿವಾಸಿ ಸೈಯದ್ ಮುಷ್ಠಕ್ ಕೊಲೆಯಾಗಿರುವ ವ್ಯಕ್ತಿ. ಆತ ಜೀವನಕ್ಕಾಗಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಹಲವು ವರ್ಷಗಳ ಹಿಂದೆ ನಗರದ ಟಿಪ್ಪು ನಗರದ ಬಡಾವಣೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ. ಅದೇ ಬಡಾವಣೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ನವೀದ್ ಮುಷ್ಠಕ್ ಹೆಂಡತಿ ನಸೀಮಾಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ನಿಧಾನವಾಗಿ ಆತನಿಗೆ ಗೊತ್ತಾಗಿದೆ. ಹೀಗಾಗಿ, ಟಿಪ್ಪು ನಗರದಿಂದ ಅಗ್ರಹಾರಕ್ಕೆ ತನ್ನ ಫ್ಯಾಮಿಲಿಯನ್ನು ಶಿಫ್ಟ್ ಮಾಡಿದ್ದಾನೆ.
ಆದರೂ ಸಹವಾಸ ಬಿಡದ ನವೀದ್ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವ ಮುಷ್ಠಕ್‌ನನ್ನು ಮುಗಿಸಲೇಬೇಕೆಂದು ನಿರ್ಧಾರ ಮಾಡಿ ಮಾತನಾಡುವ ನೆಪದಲ್ಲಿ ಆತನನ್ನು ಚಿಂತಾಮಣಿ ನಗರದ ಅಜಾದ್ ಚೌಕ್ಗೆ ಕರೆಸಿಕೊಂಡು ಚಾಕಿನಿಂದ ಎರಡು ಮೂರು ಬಾರಿ ಇರಿದು ಕೊಲೆ ಮಾಡಿದ್ದಾನೆ.
ಮೂವರು ಮಕ್ಕಳು ಹಾಗೂ ಗಂಡನೊಂದಿಗೆ ಸಂತೋಷವಾಗಿ ಇರಬೇಕಿದ್ದ ನಸೀಮಾ ತನ್ನ ಕೈಯಾರೇ ಸಂಸಾರಕ್ಕೆ ಕೊಳ್ಳಿ ಇಟ್ಟುಕೊಂಡಿದ್ದಾಳೆ. ನವೀದ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ.
ಮುಷ್ಠಕ್ ತನ್ನ ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ. ಮುಷ್ಠಕ್ ಬೀದಿ ಹೆಣವಾದ ಸಂಗತಿ ಕೇಳಿ ಆತನ ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ.
ಬಾಳಿ ಬದುಕಬೇಕಿದ್ದ ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ನವೀದ್ ತನ್ನ ತಾಯಿಯನ್ನು ಸಾಕುವುದನ್ನು ಬಿಟ್ಟು ಜೈಲು ಪಾಲಾಗಿದ್ದಾನೆ. ಅಕ್ರಮ ಸಂಬಂಧದ ಚಪಲಕ್ಕೆ ಬಿದ್ದು ತನ್ನ ಭವಿಷ್ಯವನ್ನು ಹಾಳು ಮಾಡಿಕೊಂಡು ಕಂಬಿ ಎಣಿಸುತ್ತಿದ್ದಾನೆ.
ಇದನ್ನೂ ಓದಿ: ಚಿನ್ನಾಭರಣ ಮಳಿಗೆ ಮಾಲೀಕ ಕೋವಿಡ್‌ಗೆ ಬಲಿ: ಸಹೋದರ 4 ಕೋಟಿ ರೂ ಮೌಲ್ಯದ ಚಿನ್ನಸಮೇತ ಪರಾರಿ