ಚಿಕ್ಕಬಳ್ಳಾಪುರ: ಪೈಪ್‌ಲೈನ್ ಕಾಮಗಾರಿ ನಿರ್ವಹಿಸದೇ ಬಿಲ್ ಮಾಡಿಕೊಂಡಿರುವ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೈಪ್‌ಲೈನ್ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಲೋಕಯುಕ್ತಕ್ಕೆ ದೂರು ನೀಡಿದ್ದರು.
ಇಲ್ಲಿನ ತಾಲೂಕು ಪಂಚಾಯತಿ 2017-18 ನೇ ಸಾಲಿನ ಮುದ್ರಾಂಕ ಶುಲ್ಕ ಯೋಜನೆಯಡಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ವಾಟರ್ ಮ್ಯಾನ್ ಕೃಷ್ಣಪ್ಪ ಮನೆ ಹತ್ತಿರದಿಂದ ಸಿಸ್ಟನ್(ಭೂಮಿಯ ಕೆಳ ಭಾಗದ ದೊಡ್ಡ ಪೈಪ್ ಭಾಗ) ವರಿಗೆ ಕಾಮಗಾರಿಗೆ 0.50 ಲಕ್ಷ ರೂ.ಗಳ ಮೊತ್ತದಲ್ಲಿ ಪೈಪ್‌ಲೈನ್ ಕಾಮಗಾರಿ ಮಂಜೂರಾಗಿತ್ತು.
ಗ್ರಾಮ ಪಂಚಾಯತಿಯಿಂದ ಸಿಸ್ಟನ್ ವರೆಗೂ 0.50 ಲಕ್ಷದ ಎರಡು ಕಾಮಗಾರಿಗಳನ್ನು ನಿರ್ವಹಿಸದೆ ಬಿಲ್ ಮಾಡಿ ಸರ್ಕಾರದ ಹಣ ದುರಪಯೋಗ ಪಡಿಸಿಕೊಂಡ ಗುತ್ತಿಗೆದಾರ ಹಾಗೂ ಗ್ರಾಮಾಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸ್ಥಳೀಯ ಶಾಸಕರು ಹಾಗೂ ನಾಗರಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಯುಕ್ತ ಅಧಿಕಾರಿ ಎ.ಇ.ಅಶೋಕ್ ಹಾಗೂ ಅಧಿಕಾರಿಗಳ ತಂಡ ತಾಲೂಕು ಕಚೇರಿಗೆ ಭೇಟಿ ನೀಡಿದ್ದಲ್ಲದೇ ನಿರ್ವಹಣಾಧಿಕಾರಿ ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಾಪಸ್ ತೆರಳಿದ್ದಾರೆ.
ಭೇಟಿಯ ವೇಳೆ ಗ್ರಾಮಸ್ಥರು ಸಮರ್ಪಕ ಮಾಹಿತಿ ನೀಡದೆ ಇರುವುದರಿಂದ ಅಧಿಕಾರಿಗಳು ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.