ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20ರ ಗಡಿ ದಾಟುತ್ತಿದೆ. ಈ ಹಿನ್ನೆಲೆ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಂದ್ರೆ 1,000 ರೂಪಾಯಿ ದಂಡ ವಸೂಲಿ ಮಾಡಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ ರಸ್ತೆಯಲ್ಲಿ ಉಗುಳುವುದು, ಮಾಸ್ಕ್ ಧರಿಸದೆ ರಸ್ತೆಗೆ ಬರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೊದಲನೇ ಬಾರಿಗೆ ನಿಯಮ ಉಲಂಘಿಸಿದರೆ 100 ರೂ. ದಂಡ ವಿಧಿಸಲಾಗುವುದು. ನಂತರ ಎರಡನೇ ಬಾರಿಗೆ 500 ರೂ. ಹಾಗೂ ನಂತರ ನಿಯಮ ಉಲಂಘಿಸಿದರೆ 1,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆಯಿಂದ ಹೊರಗೆ ಬರದಂತೆ ಸಾರ್ವಜನಿಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ದಂಡ ವಸೂಲಾತಿಯ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.