ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ನೋಡ ನೋಡುತ್ತಿದ್ದಂತೆ ಮನೆಯೊಂದು ಕುಸಿದು ಬಿದ್ದಿದ್ದು 7 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀರ್ಜೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ಕೆರೆ, ಕುಂಟೆ, ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ನೀರು ಗ್ರಾಮಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ಬೀರ್ಜೇಹಳ್ಳಿ ಗ್ರಾಮದ ಮುನಿರಾಜು ನಾಗಮಣಿ ದಂಪತಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಮೊದಲೇ ಶಿಥಿಲ ಹಂತದಲ್ಲಿದ್ದ ಮನೆಯಲ್ಲಿ ದಂಪತಿ ಸೇರಿದಂತೆ ನಾಲ್ಕು ಜನ ಮಕ್ಕಳು, ಒಬ್ಬ ವೃದ್ಧೆ ವಾಸವಾಗಿದ್ದರು. ಕುಟುಂಬಸ್ಥರು ಮನೆಯಲ್ಲಿರುವಾಗಲೇ ಗೋಡೆ ಸೇರಿದಂತೆ ಸಂಪೂರ್ಣ ಮನೆ ಕೆಳಗೆ ಬಿದ್ದಿದ್ದು, 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಸಮೀಕ್ಷಾ ವರದಿ ಬರುತ್ತಿದ್ದಂತೆ ಬೆಳೆ ಹಾನಿ ಪರಿಹಾರ ವಿತರಣೆ: ಸಿಎಂ ಬೊಮ್ಮಾಯಿ ಅಭಯ
ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಚಿತ್ರಾವತಿ ಜಲಾಶಯ:
ಬಾಗೇಪಲ್ಲಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಚಿತ್ರಾವತಿ ಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜೊತೆಗೆ ತಾಲೂಕಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಗಳು, ಪಟ್ಟಣ ಜಲಾವೃತವಾಗಿದೆ.
ಇನ್ನು ತಾಲೂಕಿನ ಯಲ್ಲಂಪಲ್ಲಿಬಳಿ ಐದು ಮನೆಗಳು ಕುಸಿದು ಬಿದ್ದಿವೆ. ಆಚೇಪಲ್ಲಿ ಗ್ರಾಮದಲ್ಲಿ ವೆಂಕಟೇಶ್ ಮತ್ತು ಶಿವಗಾಮಿ ದಂಪತಿ ಗುಡಿಸಲು ಮನೆಯ ಗೋಡೆ ಕುಸಿದಿದ್ದು, ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.