ಗುಡಿಬಂಡೆ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ದಿ.ಅಜಿತ್ ಕುಮಾರ್ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಗ್ರಾಮೋತ್ಸವ ಹಾಗೂ ಸೇವಾದಿನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿರು.
ಬಳಿಕ ಆರ್ಶೀವಚನ ನೀಡಿದ ಅವರು, ನಮ್ಮ ದೇಶದಲ್ಲಿ ಅನೇಕರು ಸಮಾಜಸೇವೆ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಿಮ್ಮ ಬಗ್ಗೆ ಇಡೀ ದೇಶ ನೆನೆಪಿಸಿಕೊಳ್ಳಬೇಕಾದರೆ ದೇಶ ಮೆಚ್ಚುವಂತಹ ಕೆಲಸ ಮಾಡಬೇಕು. ಚಳಿ, ಆಹಾರ, ನಿದ್ರೆಯನ್ನು ಲೆಕ್ಕಿಸದೇ ಹಿಮಾಲಯ ತಪ್ಪಲಿನಲ್ಲಿ ಕಾಯುತ್ತಿರುವ ಸೈನಿಕರಿಂದಲೇ ಇಂದು ನಾವು ಸಂತೋಷದಿಂದ ಬದುಕುತ್ತಿದ್ದೇವೆ. ಸೂರ್ಯ ಹುಟ್ಟಿದ ಕೂಡಲೇ ಹೇಗೆ ಎಲ್ಲಾ ಕೆಲಸಗಳು ನಡೆಯುತ್ತದೆಯೋ ಅದೇ ರೀತಿ ನಾವು ಕೂಡ ಒಬ್ಬರಿಗಾಗಿ ಕಾಯದೇ ಸಮಾಜದ ಅಭಿವೃದ್ದಿಗೆ, ದೇಶದ ಒಳಿತಿಗಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿದಂತಹ ಮಹನೀಯರನ್ನು ಸದಾ ನೆನೆಯುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದರು.
ಇನ್ನು ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಭಾರತಮಾತೆಯ ಚಿತ್ರದೊಂದಿಗೆ ಎತ್ತಿನಗಾಡಿಯಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ನಂತರ ಒಂದೇ ಸಮಯಕ್ಕೆ ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ? ಎಂಬ ವಿಷಯದ ಬಗ್ಗೆ ಕೃಷಿಕರ ಗೋಷ್ಠಿ, ಮಾತೃತ್ವ, ನೇತೃತ್ವ, ಕರ್ತೃತ್ವ ವಿಷಯದ ಬಗ್ಗೆ ಮಹಿಳಾಗೋಷ್ಠಿ ಹಾಗೂ ಯುವನಡಿಗೆ ಗ್ರಾಮದೆಡೆಗೆ ಎಂಬ ವಿಷಯದ ಬಗ್ಗೆ ಯುವಗೋಷ್ಠಿಗಳು ನಡೆದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.