ಚಿಕ್ಕಬಳ್ಳಾಪುರ: ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವಂತೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ಅನೇಕ ಯೋಜನೆಗಳ ಮೂಲಕ ಹೆಜ್ಜೆಯನ್ನಿಟ್ಟಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿತ್ತು. ಆದರೆ ಬಹುತೇಕ ರೈತ ಫಲಾನುಭವಿಗಳಿಗೆ ಪ್ರಯೋಜನ ಲಭಿಸಿರಲಿಲ್ಲ. 2.30 ಲಕ್ಷ ರೈತರಿಗೆ ಸಾಲ ಮನ್ನಾ ಬಾಕಿ ಇತ್ತು. ಹೀಗಾಗಿ ಒಟ್ಟಾರೆ ಬಾಕಿ ಇದ್ದ 5092 ಕೋಟಿ ರೂಪಾಯಿಯ ಸಾಲ ಮನ್ನಾವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.
ಚಿಕ್ಕಾಬಳ್ಳಾಪುರ ಹಾಗೂ ಕೋಲಾರದಲ್ಲಿ 40 ಮಂದಿಗೆ ಮಾತ್ರ ಸಾಲಮನ್ನಾ ಬಾಕಿ ಇದ್ದು, ಅದನ್ನು ಸಹ ಶೀಘ್ರದಲ್ಲಿಯೇ ಪರಿಹರಿಸಲಾಗುವುದು. ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ದೊರೆತಿದೆ ಎಂದರು.