ಚಿಕ್ಕಬಳ್ಳಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿದಂತೆ ಹಲವೆಡೆ ಭೂಮಿಯಲ್ಲಿ ದೊಡ್ಡ ಸದ್ದು ಕೇಳಿಸುತ್ತಿದ್ದು ಭಯದಿಂದ ಸ್ಥಳೀಯರು ಗ್ರಾಮವನ್ನೇ ತೊರೆಯಲು ತೀರ್ಮಾನಿಸಿದ್ದಾರೆ.
ಮಂಗಳವಾರ ರಾತ್ರಿ ಮತ್ತು ಮುಂಜಾನೆ ಭೂಮಿ ಕಂಪಿಸಿದ ಅನುಭವವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಭೂಕಂಪದ ಯಾವುದೇ ಸೂಚನೆ ಇಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದು ನಿಗೂಢ ಸದ್ದಿನ ಬಗ್ಗೆ ಪರಿಶೀಲಿಸಲಾಗುವೆಂದು ತಿಳಿಸಿದ್ದಾರೆ. ಇತ್ತ ಮತ್ತೆ ಇಂದು ನಸುಕಿನ ಜಾವ ಭೂಮಿಯಲ್ಲಿ ದೊಡ್ಡ ಶಬ್ದವೊಂದು ಕೇಳಿಸಿದ್ದು, ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬೀಳಲಾರಂಭಿಸಿವೆ. ಇದರಿಂದ ಆತಂಕಗೊಂಡ ಮಿಟ್ಟಹಳ್ಳಿ, ನಂದನವನ, ಅಪ್ಸನಹಳ್ಳಿ,ಗೋನೇನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ.
ನಂತರ 10ರ ಸುಮಾರಿಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಭಯದಲ್ಲೇ ಗ್ರಾಮಸ್ಥರು ಕಾಲಕಳೆದಿದ್ದಾರೆ. ಇನ್ನು ಜಿಲ್ಲಾಧಿಕಾರಿ ಆರ್.ಲತಾ ಸೇರಿದಂತರ ಎಸ್ಪಿ ಮಿಥುನ್ ಕುಮಾರ್ ಸ್ಥಳ ಪರಿಶೀಲನೆ ಮಾಡಿ ಧೈರ್ಯ ತುಂಬಿದ್ದಾರೆ. ಸುಮಾರು 6 ಬಾರಿ ಭೂಮಿಯಿಂದ ಬೃಹತ್ ಸದ್ದು ಕೇಳಿದೆ ಎನ್ನಲಾಗಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಕಳೆದ 3 ವರ್ಷಗಳ ಹಿಂದೆ ಜಿಲ್ಲೆಯಲ್ಲಿ 1.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇಲ್ಲಿ ಈಗ ಕೇಳಿ ಬಂದ ಶಬ್ಧ ಯಾವುದೇ ಭೂಕಂಪನದ್ದು ಎನ್ನುವಂತಹ ಮಾಹಿತಿ ತಿಳಿದು ಬಂದಿಲ್ಲವೆಂದು ಅಧಿಕಾರಿಗಳು ಸ್ಪಷ್ಡಪಡಿಸಿದರು.
ಸದ್ಯ ಕಳೆದ ಮೂರು ದಿನಗಳಿಂದ ಪದೇ ಪದೇ ನಿಗೂಢ ಶಬ್ಧದಿಂದ ಭಯಬೀತರಾದ ಗ್ರಾಮಸ್ಥರಿಗೆ ಭೂಮಿಯಿಂದ ಕೇಳಿ ಬರುತ್ತಿರುವ ಶಬ್ಧ ಏನು ಎಂಬ ಪ್ರಶ್ನೆ ಮೂಡಿಬಂದಿದೆ. ಅಧಿಕಾರಿಗಳು ಭೂಕಂಪದ ಸೂಚನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಿಗೂಢ ಶಬ್ಧಕ್ಕೆ ಹೆದರಿ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ದೂರದ ಸ್ಥಳಗಳಿಗೆ ತೆರಳಲು ತೀರ್ಮಾನಿಸಿದ್ದಾರೆ.