ಬಾಗೇಪಲ್ಲಿ : ಡಾ. ಅನಿಲ್‌ಕುಮಾರ್ ಆವುಲಪ್ಪ ತಮ್ಮ ಪೀಪಲ್ಸ್ ಆಸ್ಪತ್ರೆಯ ವತಿಯಿಂದ ತಾಲೂಕಿನಾದ್ಯಂತ ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಬಡ ಕೂಲಿಕಾರರಿಗೆ, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇಲ್ಲಿನ ಬಡ ಜನತೆಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವ ಮೂಲಕ ಜನರನ್ನು ತಲುಪುತ್ತಿದ್ದಾರೆ. ಈ ಮಹತ್ತರ ಕಾರ್ಯಕ್ಕೆ ಇಂದು ಚೇಳೂರು ಗ್ರಾಮದ ಕೃಷಿ ಕೂಲಿಕಾರರಿಗೆ ಶಿಬಿರ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ಉಚಿತ ಔಷಧಿ ವಿತರಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಅಲ್ಲದೇ ತನ್ನ ಸ್ವಂತ ಹಣದಿಂದ ಬಡವರ ಪರ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಸೋಂಕಿನಿಂದ ಬಡ ಕೂಲಿಕಾರರು ಪಾರಾಗಲು, ಹಳ್ಳಿಯಲ್ಲಿ ಓದಿರುವ ಕನಿಷ್ಟ 7 ಮಂದಿಯ ಗುಂಪು ರಚಿಸಿ ಅವರ ಮೂಲಕ ಆ ಹಳ್ಳಿಯಲ್ಲಿರುವ 60 ವರ್ಷಗಳ ಮೇಲ್ಪಟ್ಟ ಹಾಗೂ ರಿಸ್ಕ್ ಪಾಪುಲೇಷನ್ ಎಂದು ಗುರುತಿಸುತ್ತಿದ್ದಾರೆ. ನಂತರ ಅವರಿಗೆ ಪ್ರತಿ ದಿನ ಥರ್ಮಲ್ ಟೆಸ್ಟ್ ಮತ್ತು ಪಲ್ಸ್ ಆಕ್ಸೀಮೀಟರ್ ಮೂಲಕ ಸ್ಯಾಚುರೇಷನ್ ಮತ್ತು ಪಲ್ಸ್ ರೀಡಿಂಗ್ ದಾಖಲು ಮಾಡಿ ವೈದ್ಯರಿಗೆ ನೀಡಬೇಕು. ಅದನ್ನು ವೈದ್ಯರು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಾರೆ. ಈ ಮೂಲಕ ಬಡವರು ಮಹಾಮಾರಿ ಸೋಂಕಿನಿಂದ ಪಾರಾಗಲು ಸಾಧ್ಯವಿದೆ ಎಂದು ಈ ಪ್ರಯತ್ನ ಕೈಗೊಂಡಿದ್ದಾರೆ.
ಬಾಗೇಪಲ್ಲಿ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶ. ನಿರಂತರ ಬರಗಾಲ ಮತ್ತು ಬಡತನ ಆವರಿಸಿದೆ. ಇಂತಹ ವಿಪತ್ತು ಸಂದರ್ಭದಲ್ಲಿ ಬಡ ಜನರ ಬದುಕಿಗೆ ಆಸರೆಯಾಗಿ ನಿಲ್ಲುವ ಸಲುವಾಗಿ ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ ಈ ಕಾರ್ಯ ಕೈಗೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಸ್ವಂತ ದುಡಿಮೆಯ ಲಕ್ಷಾಂತರ ರೂಪಾಯಿಗಳ ಔಷಧ, ಮಾತ್ರೆಗಳನ್ನು ಖರೀದಿಸಿ ಬಡ ಜನತೆಗೆ ನೀಡುವ ಮೂಲಕ ನಿತ್ಯವೂ ಕೋವಿಡ್-19 ವಾರಿಯರ್ ಆಗಿ ದುಡಿಯುತ್ತಿದ್ದಾರೆ.
ನಿಮ್ಹಾನ್ಸ್‌ನ ನ್ಯೂರಾಲಜಿಯ ತಜ್ಞ ಡಾ.ರವಿಕುಮಾರ್ ಅವರು ಹೇಳುವ ಪ್ರಕಾರ, ಡಿಸೆಂಬರ್ ಹೊತ್ತಿಗೆ ದೇಶದ ಅರ್ಧದಷ್ಟು ಜನರಿಗೆ ಕೊರೊನಾ ಸೋಂಕು ತಗುಲಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕಿಗೆ ಸಾಮಾನ್ಯವಾಗಿ ಬಲಿಯಾಗುತ್ತಿರುವುದು ವಯೋವೃದ್ಧರು. ಹಾಗಾಗಿ ಅಂತಹವರಿಗೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳುತ್ತಿರುವ ಡಾ.ಅನಿಲ್‌ಕುಮಾರ್ ಅವರ ಕಾರ್ಯ ಶ್ಲಾಘನೀಯ.
ಹೀಗೆ ಅವರ ಸೇವೆ ಈ ಬರಡು ನೆಲದಲ್ಲಿನ ಬಡವರಿಗೆ ಪ್ರಾಣದಾತವಾಗುತ್ತಿರಲಿ ಎಂದು ಮದಕವಾರಪಲ್ಲಿ ನಿವಾಸಿ ಮಾರುತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಬಡವರ, ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ವೈದ್ಯರು ದೊರೆತಿರುವುದು ನಮ್ಮಂತಹ ಬರಡುನೆಲದವರ ಅದೃಷ್ಟವೇ ಸರಿ ಎಂದು ಐವಾರಪಲ್ಲಿ ಹರೀಶ್ ಹೇಳಿದರು.