ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯವರ ನಿರ್ಲಕ್ಷ್ಯ ಹಾಗೂ ಲಂಚತನಕ್ಕೆ ಬಾಣಂತಿಯೊಬ್ಬರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ಘಟನೆ?: ಚಿಂತಾಮಣಿ ತಾಲೂಕಿನ ನೀಲಪಲ್ಲಿ ಗ್ರಾಮದ ಗೋಪಾಲಗೌಡ, ಪತ್ನಿ ನೇತ್ರಾವತಿಯ ಹೆರಿಗೆಗೆ ಕಳೆದ ತಿಂಗಳು 9ರಂದು ಚಿಂತಾಮಣಿ ಸರ್ಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪೆತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಸಿಸೇರಿಯನ್ ಮಾಡಲಾಗಿತ್ತು. ತಾಯಿ ಮತ್ತು ಮಗು ಆರೋಗ್ಯವಾಗಿಯೇ ಇದ್ದರು.
ಇದ್ದಕ್ಕಿದ್ದಂತೆ ತಾಯಿಗೆ ಜಾಂಡೀಸ್ ಕಾಣಿಸಿಕೊಂಡ ಕಾರಣದಿಂದ ಸಿಸೇರಿಯನ್ ಮಾಡಿದ ಜಾಗದಲ್ಲಿ ಹೊಲಿಗೆ ಹಾಕಲು ಆಸ್ಪತ್ರೆಯವರು ನಿರ್ಲಕ್ಷ್ಯ ತೋರಿದ್ದಾರೆ. ತದನಂತರ ಸಿಸೇರಿಯನ್ ಮಾಡಿದ ಜಾಗದಲ್ಲಿ ಸಫ್ಟಿಕ್ ಆಗಿ ಗಾಯದಲ್ಲಿ ನೀರು ತುಂಬಿಕೊಂಡು ಕಿಡ್ನಿ ಮತ್ತು ನರಗಳ ದೌರ್ಬಲ್ಯದಿಂದ ತಾಯಿ ಮೃತಪಟ್ಟಿದ್ದಾರೆ.
ಪತಿಯ ಆರೋಪ?: ಮೊದಲ ಬಾರಿ ಹೆಣ್ಣು ಮಗುವಿನ ಹೆರಿಗೆಗೆ ಅದೇ ಆಸ್ಪತ್ರೆಗೆ ದಾಖಲಾಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಅದೇ ನಂಬಿಕೆಯ ಮೇಲೆ ಎರಡನೇ ಮಗುವಿನ ಹೆರಿಗೆಗೆ ಎಂದು 10 ಸಾವಿರ ಲಂಚ ಕೊಟ್ಟು ಹೆರಿಗೆ ಮಾಡಿಸಿದ್ದೆ. ಆದರೆ, ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ನನ್ನ ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿ ಗೋಪಾಲಗೌಡ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇಸ್ ಶೀಟ್ ಒಬ್ಬರದ್ದು, ಆಪರೇಷನ್ ಇನ್ನೊಬ್ಬರಿಗೆ: ತೆಲಂಗಾಣದಲ್ಲಿ ವೈದ್ಯರ ಎಡವಟ್ಟು!