ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ನಲ್ಲಿಮರದಹಳ್ಳಿಯಲ್ಲಿನ ಹಳೇ ಅಂಗನವಾಡಿ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಹಳದಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಶವವನ್ನು ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಲ್ಲಿಮರದಹಳ್ಳಿ ಅಂಡರ್ ಪಾಸ್ ಮಾರ್ಗದಲ್ಲಿ ಸ್ಥಳೀಯರು ಹೋಗುವ ವೇಳೆ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ, ನಾಯಿ ಸತ್ತಿರಬಹುದೆಂದು ಹೋಗಿ ನೋಡಿದಾಗ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.