ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಸುಧಾಕರ್ ಮತ್ತು ಜಿಲ್ಲೆಯ ಕಾಂಗ್ರೆಸ್ ಶಾಸಕರ ಮಧ್ಯೆ ಮಾತಿನ ಕೆಸರೆರೆಚಾಟ ಜೋರಾಗ್ತಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಪರಸ್ಪರರು ಅಕ್ರಮ ಆಸ್ತಿಗಳ ಬಗ್ಗೆ ನೇರ ಆರೋಪ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ ಸುಧಾಕರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಗೌರಿಬಿದನೂರು ಎಂಎಲ್‌ಎ ಶಿವಶಂಕರ್ ರೆಡ್ಡಿ, ಶ್ರೀನಿವಾಸಪುರ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ನೇರ ಆರೋಪಗಳು ನಡೆಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ.
ಸದ್ಯ ಇತ್ತಿಚ್ಚೇಗಷ್ಟೇ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪನವರ ಅಕ್ರಮ ಆಸ್ತಿಗಳ ಹೊರ ಹಾಕುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರೋ ಶಾಸಕ ಮುನಿಯಪ್ಪ, ನಾನು ಏನಾದ್ರೂ ಅಕ್ರಮ ಮಾಡಿದ್ದರೆ ಬಯಲಿಗೆ ತರಲಿ. ಅದರಿಂದ ನಮಗೇನೂ ತೊಂದರೆಯಾಗುವುದಿಲ್ಲ. ಬೆದರಿಕೆ ಹಾಕಿದರೆ ಅವೆಲ್ಲ ನಮ್ಮ ಬಳಿ ನಡೆಯುವುದಿಲ್ಲ. ನಾನು ರಾಜಕೀಯಕ್ಕೆ ಬಂದಾಗ ಸುಧಾಕರ್ ಇನ್ನೂ ಹುಟ್ಟಿರಲಿಲ್ಲಾ ಎಂದು ಅನರ್ಹ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಡಿ ಕೆ ಶಿವಕುಮಾರ್ 6 ಬಾರಿ ಶಾಸಕರಗಿದ್ದಾರೆ. ಅವರೊಬ್ಬ ಹಿರಿಯ ರಾಜಕಾರಣಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ ಎನ್ನುವುದಕ್ಕಿಂತ ಬದಲಾವಣೆಯಾಗಬೇಕಿದೆ. ಆದ್ದರಿಂದ ಅರ್ಹತೆ ಇರುವ ನಾಯಕರು ಅಧ್ಯಕ್ಷ ಸ್ಥಾನವನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅಧ್ಯಕ್ಷರಾಗುವ ಎಲ್ಲಾ ಅರ್ಹತೆಗಳು ಡಿಕೆಶಿಯವರಿಗಿದೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆಯ ಅವಶ್ಯಕತೆ ಇದ್ದು, ಇದರಿಂದ ಸಾಕಷ್ಟು ಹೆಸರುಗಳು ಕೇಳಿ ಬರುತ್ತಿವೆ ಎಂದು ಇದೇ ವೇಳೆ ಮುನಿಯಪ್ಪ ಹೇಳಿದ್ದಾರೆ.
ಇನ್ನು ಆಡಳಿತ ಪಕ್ಷ ಬಿಜೆಪಿ ಕುಸಿದು ಹೋಗಿದೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬಂದಿರುವುದು ಇದೇ ಮೊದಲ ಬಾರಿ ಎಂದರೆ ತಪ್ಪಾಗಲಾರದು. ಒಂದು ಕಡೆ ಪ್ರವಾಹದಿಂದ ಜನರು ಸಂಕಷ್ಟದಲ್ಲಿ ಇದ್ರೆ ಮತ್ತೊಂದು ಕಡೆ ಬರಗಾಲದಿಂದ ನೀರಿಲ್ಲದೆ ಪರದಾಡುತ್ತಿದ್ದಾರೆ. ಆದರೆ, ಜನರ ಸಮಸ್ಯೆಗಳನ್ನು ಬಗೆಹರಿಸದೇ, ಕೇಂದ್ರಕ್ಕೆ ಒತ್ತಡ ತರದೇ ನಿರ್ಲಕ್ಷ್ಯ ತೋರುತ್ತಿರೋ ಮುಖ್ಯಮಂತ್ರಿ ಯಡಿಯೂರಪ್ಪ, ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.