ಚಿಕ್ಕಬಳ್ಳಾಪುರ : ಸ್ಥಳೀಯ ಚುನಾವಣೆಗಳು ಮುಗಿದು 9 ದಿನಗಳಾಗಿವೆ. ಆದರೆ, ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳ ಬೆಂಬಲಿಗರ ನಡುವಿನ ಫೈಟ್ ಮಾತ್ರ ಇನ್ನೂ ನಿಂತಿಲ್ಲ.
ಕಳೆದ 31ರಂದು ಬಾಗೇಪಲ್ಲಿ ಪುರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಭಧ್ರಕೋಟೆಯಾಗಿ ನಿಂತಿದೆ. ಆದರೆ, ಸಿಪಿಎಂ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಪೈಟ್ ಮಾತ್ರ ದಿನೇದಿನೆ ಹೆಚ್ಚಾಗುತ್ತಿದೆ.
ವಾರ್ಡ್ ನಂಬರ್-2ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನಮ್ಮ ಸೋತಿದ್ದು ಸಿಪಿಎಂ ಪಕ್ಷದ ಸರೋಜಮ್ಮ ಗೆಲುವಿನ ನಗೆ ಬೀರಿದ್ದರು. ಈಗ ಚೆನ್ನಮ್ಮ ಮತ್ತು ಸರೋಜಮ್ಮನ ಸಂಬಂಧಿಕರ ನಡುವೆ ಮಾರಾಮಾರಿ ಶುರುವಾಗಿದ್ದು ಇಬ್ಬರು ಆಸ್ಪತ್ರೆಯ ಪಾಲಾಗಿದ್ದಾರೆ.
ಎರಡು ಪಕ್ಷದ ಕಡೆಯವರಿಂದ ನಿನ್ನೆ ರಾತ್ರಿಯೇ ಮಾರಾಮಾರಿ ಶುರುವಾಗಿದ್ದು ರಾಜು, ಪಾರ್ವತಮ್ಮ ಸೇರಿದಂತೆ ಮತ್ತಿಬ್ಬರಿಗೆ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಬೆಳಗ್ಗೆಯೂ ಸಹ ವಾಲ್ಮೀಕಿ ದೇವಾಲಯದ ಮುಂದೆ ಎರಡೂ ಕಡೆಯವರಿಂದ ಜಗಳ ಶುರುವಾಗಿ ಅದು ತಾರಕಕ್ಕೇರಿದೆ. ಈಗ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿದ್ದು ಸ್ಥಳದಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.