ಚಿಕ್ಕಬಳ್ಳಾಪುರ : ಜಮ್ಮು ಮತ್ತು ಕಾಶ್ಮೀರದ ಮೌಂಟ್ ತುಳಿಯನ್ ಶಿಖರವನ್ನು ಕೇವಲ 22 ಗಂಟೆಯೊಳಗೆ ಏರಿಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಸಾಹಸಿಗರು ಸಾಧನೆ ಮಾಡಿದ್ದಾರೆ.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಕರ್ನಾಟಕ ಸರ್ಕಾರ ವತಿಯಿಂದ ರಾಜ್ಯದ ಸಾಹಸಿಗರನ್ನು ಮೌಂಟ್ ತುಳಿಯನ್ ಶಿಖರ ಏರಲು ಆಯ್ಕೆ ಮಾಡಿಕೊಂಡಿತ್ತು. ಶಿಖರದ ತುತ್ತ ತುದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಸಿ ಮೊದಲು ಪ್ರವೇಶಿಸಿದ್ದಾರೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಮೇಶ್, ಮಂಚೇನಹಳ್ಳಿಯ ಶಂಕರ್ ನಾಗ್, ಶಿಡ್ಲಘಟ್ಟ ತಾಲೂಕಿನ ಸುನೀಲ್ ನಾಯಕ್ ಎಂಬುವರು ಸೇರಿದಂತೆ 22 ಜನರನ್ನು ಹೊಂದಿದ ತಂಡ ಜಮ್ಮು ಮತ್ತು ಕಾಶ್ಮಿರದ 16,500 ಅಡಿ ಅತಿ ಎತ್ತರದ ಮೌಂಟ್ ತುಳಿಯನ್ ಶಿಖರವನ್ನು ಕೇವಲ 22 ಗಂಟೆಯೊಳಗೆ ಏರಿ ಇಳಿದು ಸಾಹಸ ಮೆರೆದಿದೆ.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಕರ್ನಾಟಕ ಸರ್ಕಾರ ಮೌಂಟ್ ತುಳಿಯನ್ ಶಿಖರವನ್ನು ಏರಲು ಸಾಹಸಿಗರನ್ನು ಆಯ್ಕೆ ಮಾಡಿತ್ತು. ಅದರಂತೆ ಆ.26ರಂದು ವಿಮಾನ ಪ್ರಯಾಣ ಮಾಡಿ ಜಮ್ಮುವಿನ ಪಹಾಲ್ಗಮ್ನ ನಗರದ ಜವಾರ್ ಇನ್ಸ್‌ಟಿಟ್ಯೂಟ್ ಆಫ್ ಮೌಂಟೈನೇರಿಂಗ್ ಅಂಡ್ ವಿನ್ಟರ್ ಸ್ಪೋರ್ಟ್ಸ್ ಸಂಸ್ಥೆ ಸಹಕಾರದಿಂದ ಆ.31ರಂದು ಮೌಂಟ್ ತುಳಿಯನ್ ಶಿಖರವನ್ನು ಸತತವಾಗಿ 22 ಗಂಟೆಗಳ ಕಾಲ ತೆಗೆದುಕೊಂಡು ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ.
22 ಸಾಹಸಿಗರಲ್ಲಿ ಕೇವಲ 13 ಮಂದಿ ಮಾತ್ರ ಗುರಿ ತಲುಪಿದ್ದಾರೆ. ಅದರಲ್ಲಿ ಮೊಟ್ಟ ಮೊದಲಿಗೆ ಶಿಖರದ ತುದಿ ಸೇರಿಕೊಳ್ಳುವಲ್ಲಿ ಜಿಲ್ಲೆಯ ರಮೇಶ್ ಯಶಸ್ವಿಯಾಗಿದ್ದಾರೆ. ಶಿಖರವನ್ನು ಹತ್ತುವ ವೇಳೆ ಸಾಕಷ್ಟು ಅಪಾಯಗಳಿಂದ ತಪ್ಪಿಸಿಕೊಂಡ ಕೆಲವು ಘಟನೆಗಳನ್ನು ಸಾಹಸಿ ಸುನಿಲ್ ನಾಯಕ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಶಿಖರವನ್ನು ಏರುವ ವೇಳೆ ತಿನ್ನಲು ಆಹಾರದ ಸಮಸ್ಯೆ, ಉಸಿರಾಡಲು ಗಾಳಿಯ ಸಮಸ್ಯೆ ತಂಡದ ಕೆಲವರಿಗೆ ಉಂಟಾಗಿ ಸಾಕಷ್ಟು ತೊಂದರೆಯಾಗಿತ್ತು. ಅದೇ ರೀತಿ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಶಿಖರದಿಂದ ಉರುಳಿ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದೇವೆ ಎಂದು ತಿಳಿಸಿದರು.
ಸದ್ಯ ಮೌಂಟ್ ತುಳಿಯನ್ ಶಿಖರವನ್ನು ಏರಿದ ನಂತರ ತುದಿಯಲ್ಲಿ ನಾಡಧ್ವಜ ಹಾಗೂ ರಾಷ್ಟ್ರಧ್ವಜದೊಂದಿಗೆ ಪೋಸ್ ನೀಡಿರುವ ದೃಶ್ಯ ಹಾಗೂ ಶಿಖರವನ್ನು ಏರುತ್ತಿರುವ ಸಾಹಸ ದೃಶ್ಯವನ್ನ ಸಾಹಸಿ ಸುನಿಲ್ ನಾಯಕ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ಅಪೂರ್ವ ಸಾಧನೆ ಮಾಡಿದ ಸುನಿಕ್ ನಾಯಕ್, ರಮೇಶ್ ಹಾಗೂ ಶಂಕರ್ ನಾಗ್ ಅವರನ್ನು ಜಿಲ್ಲೆಯ ಜನತೆ ಕೊಂಡಾಡುತ್ತಿದ್ದಾರೆ.