ಚಿಂತಾಮಣಿ: ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕಿಯರು ಮತ್ತು ಇತರ ಸಿಬ್ಬಂದಿಯನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ, ಅವರಿಗೆ 7.40 ಲಕ್ಷ ರೂಪಾಯಿ ಸಂಬಳ ವಿತರಿಸಿದರು. ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿಗೆ ಮೂರು ತಿಂಗಳ ವೇತನ ನೀಡುವುದಾಗಿ ಶಾಸಕರು ಈ ಹಿಂದೆಯೇ ಹೇಳಿದ್ದರು.
ಶಾಸಕರು, 7 ಜನ ವೈದ್ಯರನ್ನು ಒಳಗೊಂಡಂತೆ ಒಟ್ಟು 35 ಮಂದಿಗೆ ಮೂರು ತಿಂಗಳ ವೇತನ 7.40 ಲಕ್ಷ ರೂ. ನೀಡಿದರು. ನಾಲ್ಕನೇ ತಿಂಗಳ ವೇತನ ಕೊಡಲು ಸಿದ್ದನಿರುವುದಾಗಿ ತಿಳಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಸೋಂಕಿತರನ್ನು ರಕ್ತ ಸಂಬಂಧಿಗಳೇ ಹತ್ತಿರ ಸೇರಿಸಿಕೊಳ್ಳದ ಸಂದರ್ಭದಲ್ಲಿ, ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಅವರ ಆರೈಕೆ ಮಾಡುತ್ತಿದ್ದಾರೆ.
ಜನರ ಪ್ರಾಣ ಕಾಪಾಡುತ್ತಿರುವ ಕೋವಿಡ್ ಕೇಂದ್ರದ ಎಲ್ಲಾ ಸಿಬ್ಬಂದಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ತಾಲೂಕು ದಂಡಾಧಿಕಾರಿ ಹನುಂತರಾಯಪ್ಪ, ಡಿವೈಎಸ್ಪಿ ಲಕ್ಷ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾತಿ, ವೈಧ್ಯಾಧಿಕಾರಿ ಡಾ. ಸಂತೋಷ್, ನಗರಸಭೆ ಸದಸ್ಯರಾದ ಮಂಜುನಾಥ, ಮುರಳಿ, ಜೈಭೀಮ್ ಮುರಳಿ, ದೇವಳ್ಳಂ ಶಂಕರ್, ಮಾಜಿ ಸದಸ್ಯ ವೆಂಕಟರವಣಪ್ಪ, ಮುಖಂಡರಾದ ಡಾ.ವಿ. ಅಮರ್, ಅಬ್ಬುಗುಂಡು ಮಧು, ಸಂತ್ತೆಕಲ್ಲಹಳ್ಳಿ ಮಹೇಶ್, ಪ್ರಭಾಕರ್, ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.
ಇದನ್ನೂ ಓದಿ: ಹಳ್ಳಿ ಹಳ್ಳಿಗೆ ತೆರಳಿ ಕೋವಿಡ್ ಜಾಗೃತಿ, ಉಚಿತ ಸೇವೆ: ಮಾದರಿಯಾದ ರಟ್ಟಿಹಳ್ಳಿಯ ಆಟೋ ಚಾಲಕ