ಚೇಳೂರು(ಚಿಕ್ಕಬಳ್ಳಾಪುರ): ಉಕ್ರೇನ್‌ಗೆ ಎಂಬಿಬಿಎಸ್ ಅಧ್ಯಯನ ಮಾಡಲು ಹೋಗಿದ್ದ ಬಾಗೇಪಲ್ಲಿ ತಾಲೂಕು ಚೇಳೂರಿನ ಎಂ.ಎಸ್.ನೂರ್ ಅಹಮದ್ ಅವರ ಪುತ್ರಿ ಐಮನ್ ಬೂಶ್ರಾ ಎಂಬುವವರು ಗುರುವಾರ ರಾತ್ರಿ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದು, ಕುಟುಂಬದೊಂದಿಗೆ ಸೇರಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಅಲ್ಲಿನ ಸ್ಥಿತಿ ವಿವರಿಸಿದ್ದಾರೆ. ಕಳೆದ ಗುರುವಾರ ರಾತ್ರಿ ನಾವು ಹಾಸ್ಟೆಲ್ ಬೇಸ್ ಮೇಂಟ್ನ ಅಂಡರ್ ಗ್ರೌಂಡ್ನಲ್ಲಿ ಸುರಕ್ಷಿತವಾಗಿದ್ದು, ಭಾರತದ ರಾಯಭಾರಿ ಕಚೇರಿಯಿಂದ ಕರೆ ಬಂತು. ಗುರುವಾರ ಮತ್ತು ಶುಕ್ರವಾರ ಯುದ್ದದ ದಾಳಿ ಪರಿಣಾಮ ಹೆಚ್ಚಾಗಿ ಇಲ್ಲ. ಹಾಗಾಗಿ ನೀವು ಕೀವ್ ಬಿಟ್ಟು ಹತ್ತಿರದ ಲಿವಿವ್ ಸಿಟಿಗೆ ಬಂದು ಸೇರಿ. ನಾವು ನಿಮ್ಮನ್ನು ಬರಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ನಾವು ಇರುವ ಕಡೆಯಿಂದ ಲಿವಿವ್ ಸಿಟಿಗೆ ಉಕ್ರೇನ್ ಸರ್ಕಾರ 500 ಕಿ.ಮೀ .ಉಚಿತ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಭಯದ ವಾತಾವರಣದಲ್ಲಿ ನಾವು ಹೇಗೋ ಕಷ್ಟ ಪಟ್ಟು ರೈಲು ನಿಲ್ದಾಣದ ಬಳಿ ಬಂದು ರೈಲು ಹತ್ತಲು ಮುಂದಾದೆವು. ಆದರೆ, ಉಕ್ರೇನ್ ಜನರು ನಿಮ್ಮ ಭಾರತದ ಸರ್ಕಾರ ನಮ್ಮೊಂದಿಗೆ ಸಹಕರಿಸಿಲ್ಲ ಎಂಬ ಉದ್ದೇಶದಿಂದ ನಮ್ಮನ್ನು ರೈಲು ಹತ್ತಲು ಬಿಡಲಿಲ್ಲ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಸುಮಾರು 40 ರೈಲುಗಳಲ್ಲಿ ಹತ್ತಲು ಬಿಡದೇ ಹಿಂಸೆ ನೀಡಿದರು.
ಆದರೂ ನಾವು ಹೇಗೋ ಗುಂಪಿನಲ್ಲಿ ಒಂದೊಂದು ರೈಲಿಗೆ 50-100 ವಿದ್ಯಾರ್ಥಿಗಳು ಸೇರಿ ಅವರ ಕಣ್ಣು ತಪ್ಪಿಸಿಕೊಂಡು ಲಿವಿವ್ ಸಿಟಿಗೆ ಬಂದು ಸೇರಿದವು. ಆದರೆ, ಇಲ್ಲಿಯ ಹೋಟೆಲ್ ಗಳಲ್ಲಿ ನಮ್ಮಗೆ ಆದ್ಯತೆ ನೀಡದೇ ಕೇವಲ ಉಕ್ರೇನ್ ಅವರಿಗೆ ಮಾತ್ರ ಮೊದಲ ಆದ್ಯತೆ ನೀಡಿ ಸೇರಿಸಿಕೊಂಡರು. ನಮಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡಲಿಲ್ಲ.
ಪ್ರಯಾಣಕ್ಕೆ 15 ಸಾವಿರ ತೆತ್ತೆವು: ಅಲ್ಲಿಂದ ನಾವು ಪೋಲ್ಯಾಂಡ್ ಬಾರ್ಡರ್ಗೆ ಸೇರಲು 15 ಸಾವಿರ ರೂ.ನಂತೆ ಒಬ್ಬರು ನೀಡಿ ವಾಹನದಲ್ಲಿ ಪೋಲ್ಯಾಂಡ್ ಸೇರಿದವು. ಅಲ್ಲಿ ನಮ್ಮನ್ನು ಭಾರತೀಯರು ಬಂದು ಬರಮಾಡಿಕೊಂಡು, ನಮ್ಮನ್ನು ಹೋಟೆಲ್ನಲ್ಲಿ ಸುರಕ್ಷಿತವಾಗಿ ಇರಿಸಿದರು. ನಂತರ ಭಾರತಕ್ಕೆ ವಿಮಾನಗಳು ಬಂದ ಕೂಡಲೇ ಕರೆದುಕೊಂಡು ಹೋಗುವುದಾಗಿ ನಮಗೆ ಧೈರ್ಯ ತುಂಬಿದರು.
ಬಳಿಕ ಪೋಲ್ಯಾಂಡ್ ನಿಂದ ರಕ್ಷಣಾ ಪಡೆಯ ವಿಮಾನದಿಂದ ಗುರುವಾರ ಬೆಳಗ್ಗೆ6:30ಕ್ಕೆ ದೆಹಲಿಯ ರಕ್ಷಣಾ ಪಡೆ ವಾಯುನೆಲೆಗೆ ಬಂದೆವು. ಅಲ್ಲಿಂದ ಕರ್ನಾಟಕ ಭವನಕ್ಕೆ ಕರ್ನಾಟಕ ಸರ್ಕಾರದವರು ಕರೆದು ಕೊಂಡು ಹೋದರು. ಅನಂತರ ರಾತ್ರಿ 8:30ಕ್ಕೆ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಸೇರಿದೆವು. ಕೂಡಲೇ ನಮ್ಮ ಕುಟುಂಬದವರು ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲಿಂದ ಬೆಳಗಿನ ಜಾವ 4 ಗಂಟೆಗೆ ಕ್ಷೇಮವಾಗಿ ಚೇಳೂರಿನ ಮನೆಗೆ ಸೇರಿದ್ದೇನೆ ಎಂದು ವಿವರಿಸಿದರು.
ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ: ಪೋಲ್ಯಾಂಡ್ ನಿಂದ ದೆಹಲಿಗೆ ಮತ್ತು ದೆಹಲಿಯಿಂದ ಬೆಂಗಳೂರಿಗೆ ಸುರಕ್ಷಿತವಾಗಿ ನಾವು ಇಲ್ಲಿ ಬಂದು ಸೇರಲು ವ್ಯವಸ್ಥೆ ಮಾಡಿದ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂತಹ ಭಯಾನಕ ಸ್ಥಿತಿಯಲ್ಲಿ ಭಾರತ ಸರ್ಕಾರ ಜವಾಬ್ದಾರಿಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುತ್ತಿರುವುದು ದೇಶದ ಗೌರವ, ಘನತೆಯನ್ನು ಎತ್ತಿ ತೋರಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಐಮನ್ ಬೂಶ್ರಾ ಅವರ ಕುಟುಂಬವು ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಭಾರತೀಯರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ: ರಷ್ಯಾ ಆರೋಪ