ಚಿಕ್ಕಬಳ್ಳಾಪುರ: ಪಿಎಂಎವೈ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗೆ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಫೋನ್ ಪೇ ಮೂಲಕ ಲಂಚ ಪಡೆದಿದ್ದ ನಗರಸಭೆಯ ದ್ವಿತೀಯ ದರ್ಜೆ ನೌಕರನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ.ಆರ್. ಲತಾ ಮಂಗಳವಾರ ತಾಲೂಕು ಕಚೇರಿಗೆ ಭೇಟಿ ನೀಡಿ ವಿವಿಧ ಕಡತಗಳ ಪರಿಶೀಲನೆ ನಡೆಸಿದ ನಂತರ ದಂಡಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಯ ಸಭೆ ಹಮ್ಮಿಕೊಂಡಿದ್ದರು. ಈ ಸಂದರ್ಭಧಲ್ಲಿ ನಗರದ ಗಂಗಾನಗರ ಬಡಾವಣೆಯ ನಿವಾಸಿ ಶ್ರೀನಿವಾಸ್ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ನಗರಸಭೆಯ ದ್ವಿತೀಯ ದರ್ಜೆ ಸಹಾಯಕರಾದ ಷೇಕ್ ಆರೀಫ್ ಅವರು ನಮಗೆ ಮನೆ ನಿರ್ಮಾಣಕ್ಕೆ 1.50 ಲಕ್ಷ ರೂ ಸಹಾಯಧನ ಮಂಜೂರು ಮಾಡಿಸಿಕೊಡುವುದಾಗಿ ತಿಳಿಸಿ 5 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗದು ರೂಪದಲ್ಲಿ 4,500ರೂ., ಮತ್ತು ಫೋನ್ ಪೇ ಮೂಲಕ 500 ರೂ. ತೆಗೆದುಕೊಂಡು ಸಹಾಯ ಧನ ಮಂಜೂರು ಮಾಡದೇ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ
ನೌಕರನ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ನಗರಸಭೆಯ ಪೌರಾಯುಕ್ತ ಉಮಾಶಂಕರ್ ಅವವರಿಗೆ ಸೂಚಿಸಿದ್ದರು. ಅದರಂತೆ ಪೌರಾಯುಕ್ತರು ಮಂಗಳವಾರವೇ ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಕೆಎಎಸ್ ನಿಯಮಗಳ ಪ್ರಕಾರ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಷೇಕ್ ಆರೀಫ್ ಅವರನ್ನು ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ.