ಚಿಕ್ಕಬಳ್ಳಾಪುರ: ಹೆತ್ತ ಮಗನನ್ನು ಉಳಿಸಿಕೊಳ್ಳಲು 16 ಕೋಟಿ ರೂಪಾಯಿ ಬೆಲೆಯ ಇಂಜೆಕ್ಷನ್ ಪಡೆಯಲು ಬಡ ದಂಪತಿ ಪರದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಬಳಿ ಧನಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ದಂಪತಿ ನಂದೀಶ್ ಹಾಗೂ ಸೌಮ್ಯಲತಾ ದಂಪತಿಯ ಮಗ ಯಶ್ವಿಕ್‍ಗೆ ಎಸ್‍ಎಂಎ (ಸ್ಪೈನಲ್ ಮಸ್ಕುಲರ್ ಅಟ್ರೋಫಿ) ಕಾಯಿಲೆಯಿದೆ. ಇದು ದೇಹದ ಸ್ನಾಯುಗಳನ್ನು ದುರ್ಬಲಗೊಳಿಸುವ ನರಸಂಬಂಧಿತ ಕಾಯಿಲೆಯಾಗಿದೆ.
1,000 ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ತಗುಲುವ ಸಾಧ್ಯತೆಯಿದ್ದು, ಈ ಇದಕ್ಕೆ ಗುರಿಯಾದ ಮಗು 2 ವರ್ಷಕ್ಕಿಂತ ಹೆಚ್ಚು ಸಮಯ ಬದುಕುವುದಿಲ್ಲ ಅಂತ ಹೇಳಲಾಗುತ್ತದೆ. ಈ ಕಾಯಿಲೆಯನ್ನು ಗುಣಪಡಿಸಲು ಇರುವ ಏಕೈಕ ಔಷಧಿ ಅಂದರೆ ಅದು ಝೊಲ್ಗೆನ್ಸಾ ಇಂಜೆಕ್ಷನ್. ಈ ಇಂಜೆಕ್ಷನ್ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು, ಒಂದು ಇಂಜೆಕ್ಷನ್‍ನ ಬೆಲೆ 16 ಕೋಟಿ ರೂಪಾಯಿ ಇದೆ. ಇದು ಪೋಷಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಇದನ್ನೂ ಓದಿ: ಬಾತ್ರೂಮ್ ಟಬ್ನಲ್ಲಿ ನವಜಾತ ಶಿಶು ಪತ್ತೆ!
ಗ್ರಾಮ ಪಂಚಾಯತ್ಯಲ್ಲಿ ಕರ ವಸೂಲಿಗಾರನಾಗಿರುವ ಯಶ್ವಿಕ್ ತಂದೆ ಹಾಗೂ ತಾಯಿ ಈ ಹಣ ಭರಿಸುವಷ್ಟು ಶಕ್ತರಾಗಿಲ್ಲ. ಹೀಗಾಗಿ ಸಾರ್ವಜನಿಕರು ಸಹಾಯ ಮಾಡುವಂತೆ ಬಡ ದಂಪತಿ ಅಂಗಲಾಚುತ್ತಿದ್ದಾರೆ. ಅವರ ಮೊಬೈಲ್ ಸಂಖ್ಯೆ 9148495959 ಆಗಿದ್ದು, ಸಹೃದಯಿಗಳು ಯುಪಿಐ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ.