ಚಿಕ್ಕಬಳ್ಳಾಪುರ : ಕೊರೊನಾ ಭೀತಿಯಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಇದೇ ಜೂನ್ 18 ರಂದು ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪರೀಕ್ಷೆಗೆ ಸಾಕಷ್ಟು ಮುಂಜಾಗ್ರತೆ ವಹಿಸಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂಗ್ಲಿಷ್ ವಿಷಯದ ಪರೀಕ್ಷೆಯು ಮಾರ್ಚ್ 23ರಂದು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ದೇಶದಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಹಾಗಾಗಿ,ಯಾವುದೇ ಪರೀಕ್ಷೆಗಳು ನಡೆಯಲಿಲ್ಲ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಹಲವು ಚರ್ಚೆಗಳೂ ಆಗಿದ್ದವು. ಆದರೀಗ ಸರ್ಕಾರ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜೂನ್ 18ರಂದು ಪರೀಕ್ಷೆ ನಡೆಸಲು ಪಿಯು ಬೋರ್ಡ್ ತೀರ್ಮಾನಿಸಿದೆ.
ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಸೇರಿ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ 18 ನೇ ತಾರೀಖು ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 1:30 ರ ವರೆಗೆ ಪರೀಕ್ಷೆ ನಿಗದಿಯಾಗಿದೆ.
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು:
ಚಿಕ್ಕಬಳ್ಳಾಪುರ ಕೇಂದ್ರದಲ್ಲಿ 3,209 ವಿದ್ಯಾರ್ಥಿಗಳು, ಬಾಗೇಪಲ್ಲಿ-1,676, ಗೌರಿಬಿದನೂರು- 2,230, ಶಿಡ್ಲಘಟ್ಟ-1,671, ಚಿಂತಾಮಣಿ-3326, ಗುಡಿಬಂಡೆ-103, ಒಟ್ಟು-12,215 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಪ್ರತಿ ಕೊಠಡಿಯಲ್ಲಿ ಕನಿಷ್ಠ 12 ಹಾಗೂ ಗರಿಷ್ಠ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಡೆಸ್ಕ್‌ಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕಾಗಿದೆ. ಅಲ್ಲದೇ ನೀರಿನ ಬಾಟಲಿ ತೆಗೆದುಕೊಂಡು ಬಾರದ ವಿದ್ಯಾರ್ಥಿಗಳಿಗೆ ಒಂದೇ ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಲೋಟದಲ್ಲಿ ನೀರನ್ನು ನೀಡಬೇಕು. ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ನೀಡುವಾಗ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ ಎಂದು ನೂತನ ಜಿಲ್ಲಾ ಉಪವಿಭಾಗಾಧಿಕಾರಿ ಎ.ಎನ್ ರಘುನಂದನ್ ತಿಳಿಸಿದರು.