ಚಿಕ್ಕಬಳ್ಳಾಪುರ: ಹೆರಿಗೆಗೆಂದು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯೆಯೇ ಗರ್ಭಿಣಿವೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕನಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಿಶೇಷ ಅಂದರೆ ಆ್ಯಂಬುಲೆನ್ಸ್ನಲ್ಲಿ ಪ್ರಸೂತಿ ತಜ್ಞರು ಇಲ್ಲದಿದ್ದರೂ ಶುಶ್ರೂಷಕರೇ ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೆರಿಗೆ ಮಾಡಿಸಿದ್ದಾರೆ. ಇಂದು ಮುಂಜಾನೆ ಸುಮಾರು 3-50ರ ಸಮಯದಲ್ಲಿ ಗ್ರಾಮದ ಜ್ಯೋತಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಆ್ಯಂಬುಲೆನ್ಸ್ನಲ್ಲಿ ಶುಶ್ರೂಷಕರು ಬಿಟ್ಟರೆ ಪ್ರಸೂತಿ ತಜ್ಞರು ಇರಲಿಲ್ಲ. ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಜ್ಯೋತಿಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆ್ಯಂಬುಲೆನ್ಸ್ನಲ್ಲಿದ್ದ ಪೋಷಕರು ತೀವ್ರ ಆತಂಕಗೊಂಡಿದ್ದರು.
ಆದರೆ ಆ್ಯಂಬುಲೆನ್ಸ್ನಲ್ಲಿದ್ದ ಶುಶ್ರೂಷಕರೇ ಧೈರ್ಯ ಮಾಡಿ ಹೆರಿಗೆ ಮಾಡಿಸಿದ್ದು, ಜ್ಯೋತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗುವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಶುಶ್ರೂಷಕರಾದ ಮುರಳಿ ಹಾಗೂ ಸೀನಪ್ಪ ತೋರಿದ ಮಾನವೀಯತೆಗೆ ಸಾರ್ವಜನಿಕರು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.