ಚಿಕ್ಕಬಳ್ಳಾಪುರ: ಐಟಿ ದಾಳಿ ನಡೆದಿರುವುದು ದೇವೆಗೌಡರ ಮನೆಯ ಮೇಲೆ ಅಲ್ಲ. ನಿಖಿಲ್, ಪ್ರಜ್ವಲ್ ಮೇಲೆ ಅಲ್ಲ. ಡಿಕೆಶಿ ಮನೆ ಮೇಲೂ ಅಲ್ಲ. ಐಟಿ ದಾಳಿ ನಡೆದಿರುವುದು ಗುತ್ತಿಗೆದಾರರ ಮೇಲೆ. ಆದರೆ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆದರೆ, ಕರ್ನಾಟಕದ ರಾಜಕಾರಣಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಚಕ್ರವರ್ತಿಸೂಲಿಬೆಲೆ ಟೀಕಿಸಿದರು.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ದೇಶಕ್ಕಾಗಿ ಮೋದಿ- ಮೋದಿಗಾಗಿ ನಾವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಮಂತ್ರಿಯಾದಾಗ ಭ್ರಷ್ಟರನ್ನು ರಸ್ತೆಯಲ್ಲಿ ನಿಲ್ಲಿಸುವುದಾಗಿ ಹೇಳಿದ್ದರು. ಅದು ಕರ್ನಾಟಕದಲ್ಲಿ ನಿಜವಾಯಿತು ಎಂದರು.
ಪುಲ್ವಾಮ ದಾಳಿ ಬಳಿಕ ಏರ್ಸ್ಟ್ರೈಕ್ ನಡೆದ ನಂತರ ಎಲ್ಲರೂ ಸೇರಿ ಎಲ್ಲಾ ಕ್ರೆಡಿಟ್ ಸೈನಿಕರು ಹಾಗೂ ವಿಜ್ಞಾನಿಗಳಿಗೆ ನೀಡಿದರು. ಆದರೆ ಐಟಿ ದಾಳಿ ನಡೆದಾಗ ಮಾತ್ರ ಅದನ್ನು ಮೋದಿಯ ಮೇಲೆ ಎತ್ತಿಕಟ್ಟಿದರು. ಮೋದಿಯ ಸಾಧನೆಗಳ ಪ್ರಚಾರ ತಪ್ಪಿಸುವುದೇ ಇವರ ಗುರಿಯಾಗಿವೆ ಎಂದರು.
ರಾಹುಲ್ ಗಾಂಧಿ ಪ್ರಚಾರ ಮಾಡುವಾಗ ಒಂದು ಹಳ್ಳಿಯಲ್ಲಿ ಗುಡಿಸಲು ಮನೆಯಿಂದ ಪ್ರಚಾರ ನಡೆಸಿದರು. ಐದು ವರ್ಷದ ನಂತರ ಅದೇ ಗುಡಿಸಲು ಮನೆಯಿಂದ ಪ್ರಚಾರ ಆರಂಭಿಸಿದರು. ಇದರಲ್ಲೇ ನಾವು ನೋಡಬಹುದು ಯಾರ ಬಳಿ ಅಭಿವೃದ್ಧಿ ಇದೆ ಎಂದು. ಇದುವರೆಗೂ 3 ಬಾರೀ ಅದೇ ಗುಡಿಸಲಿನಿಂದ ಪ್ರಚಾರ ಆರಂಭಿಸಿದ್ದಾರೆ. ಈಗ ಪ್ರಿಯಾಂಕಾ ಗಾಂದಿ ಸಹ ಚುನಾವಣೆ ಸಮಯದಲ್ಲಿ ಅದೇ ಮನೆಯನ್ನು ಹುಡುಕಾಟ ನಡೆಸಿದ್ದಾರೆ ಎಂದು ಟೀಕಿಸಿದರು. ಹೀಗಾಗಿ ಈ ಬಾರಿ ಕಮಲದ ಗುರುತಿಗೆ ಮತವನ್ನು ಚಲಾಯಿಸಿ, ಮತ್ತೇ ನರೇಂದ್ರ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಏರಿಸಬೇಕಿದೆ ಎಂದು ತಿಳಿಸಿದರು.