ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧ ಗ್ರಾಮಗಳಿಗೆ ಸತತವಾಗಿ ಮೂರು ದಿವಸದಿಂದ ಭೇಟಿ ನೀಡುತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್, ಸರ್ಕಾರದಿಂದ ರೈತರಿಗೆ ಅನೇಕ ಸೌಲಭ್ಯಗಳನ್ನು ಕೃಷಿ ಇಲಾಖೆಯ ಮೂಲಕ ದೊರಕಿಸಿಕೊಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ರೈತರು ಬೆಳೆಯಬೇಕೆಂದು ಸಲಹೆ ನೀಡಿದರು.
ತಾಲೂಕಿನ ಕೃಷಿ ಇಲಾಖೆಯಿಂದ ವಿವಿಧ ಸೌಲಭ್ಯ ಹಾಗೂ ಸಲಹೆಗಳನ್ನು ಪಡೆದುಕೊಂಡು ಮಾತನಾಡಿದ ಅವರು, ದೇಶದ ಆರ್ಥಿಕ ಬೆನ್ನುಲುಬಾದ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳಡಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ಬಳಸಿಕೊಂಡು ಈಗಾಗಲೇ ಅನೇಕ ರೈತರು ಕೃಷಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದಾರೆ. ತಾಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಕೆಲವು ಪ್ರಗತಿಪರ ರೈತರು ಮಿಶ್ರ ಬೇಸಾಯ ಪದ್ಧತಿ, ಸಾವಯವ ಕೃಷಿ ಪದ್ದತಿ ಹೀಗೆ ಅನೇಕ ನೂತನವಾದ ಹಾಗೂ ಸುಲಭ ರೀತಿಯ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡಿದ್ದಾರೆ.
ಅವುಗಳನ್ನು ಜಿಲ್ಲೆಯ ಎಲ್ಲಾ ರೈತರು ಅಳವಡಿಸಿಕೊಳ್ಳಲು ಯಾವ ರೀತಿಯಲ್ಲಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಅರಿಯಲು ಈ ಭೇಟಿಯನ್ನು ಕೈಗೊಂಡಿದ್ದೇನೆ ಎಂದರು.