ಚಿಕ್ಕಬಳ್ಳಾಪುರ/ತುಮಕೂರು/ಚಿತ್ರದುರ್ಗ: ಮೈತ್ರಿ ಅಭ್ಯರ್ಥಿ ಹಾಗೂ ಎರಡು ಬಾರಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ನಗರಸಭೆಯ ಮತಗಟ್ಟೆ 162ರಲ್ಲಿ ತಮ್ಮ ಕುಟುಂಬದೊಂದಿದೆ ಮತ ಚಲಾಯಿಸಿದ್ದಾರೆ.
ವೀರಪ್ಪ ಮೊಯ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು. ವೀರಪ್ಪ ಮೊಯ್ಲಿ ಜೊತೆಗೆ ಪತ್ನಿ ಮಾಲತಿ, ಮಗ ಹರ್ಷ ಮೊಯ್ಲಿ, ಪುತ್ರಿ ಹಂಸ ಮೊಯ್ಲಿ ಮತದಾನ ಮಾಡಿದರು.
ತುಮಕೂರಲ್ಲಿ ಜಿ.ಎಸ್.ಬಸವರಾಜ್ ಮತದಾನ:
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್, ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 25ರಲ್ಲಿ ಮತ ಚಲಾಯಿಸಿದರು.
ಕುಟುಂಬ ಸಮೇತರಾಗಿ ಬಂದು ಬಸವರಾಜ್ ಮತದಾನ ಮಾಡಿದರು. ಮತಗಟ್ಟೆ ಬಳಿ ಬಂದ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಮತದಾರರು ಸಾಲುಗಟ್ಟಿ ನಿಂತಿದ್ದರು. ಕ್ಯೂನಲ್ಲಿ ನಿಲ್ಲಲು ಸಮಯವಿಲ್ಲ. ಹಾಗಾಗಿ ಮತಗಟ್ಟೆಯೊಳಗೆ ಹೋಗಿ ಮತದಾನ ಮಾಡಲು ಅವಕಾಶ ಕೊಡುವಂತೆ ಸರತಿ ಸಾಲಿನಲ್ಲಿ ಇದ್ದ ಮತದಾರರ ಬಳಿ ಕೇಳಿಕೊಂಡಿದ್ದು ವಿಶೇಷವಾಗಿತ್ತು.
ಮತದಾರರು ಕೂಡ ಇದಕ್ಕೆ ನಗುತ್ತಲೇ ಸಮ್ಮತಿ ಸೂಚಿಸಿದರು. ನಂತರ ಕುಟುಂಬ ಸಮೇತರಾಗಿ ಹೋಗಿ ಮತ ಚಲಾವಣೆ ಮಾಡಿದರು.
ಎ ನಾರಾಯಣಸ್ವಾಮಿ ಮತದಾನ:
ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಕುಟುಂಬ ಸಮೇತ ಆನೇಕಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಎ.ನಾರಾಯಣಸ್ವಾಮಿ ತಮ್ಮ ಕುಟುಂಬ ಸಮೇತ ಆನೇಕಲ್ ಪಟ್ಟಣದ ಗೋಪಾಲರಾಜು ಕಾಲೇಜಿನಲ್ಲಿನ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಸಮೇತ ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆ ಸಮೀಪಕ್ಕೆ ಹಾಜರಾದರು. ನಂತರ ಎ.ನಾರಾಯಣಸ್ವಾಮಿ ಪತ್ನಿ ವಿಜಯಲಕ್ಷ್ಮಿ ಮಕ್ಕಳೊಂದಿಗೆ ಒಬ್ಬೊಬ್ಬರಂತೆ ಮತಗಟ್ಟೆಗೆ ತೆರಳಿ ಚುನಾವಣಾ ನಿಯಮಗಳಂತೆ ಮತ ಚಲಾಯಿಸಿದರು.