ಚಿಕ್ಕಬಳ್ಳಾಪುರ : ಉಪ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಜಿಲ್ಲೆಯಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಮಾತ್ರ ಮತದಾರರನ್ನು ಸೆಳೆಯಲು ಬಿರುಸಿನ ಪ್ರಚಾರವನ್ನು ಶುರು ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಾಂಗ್ರೆಸ್,ಜೆಡಿಎಸ್ ನಡುವೆ ಕದನ ನಡೆಯುತ್ತಿತ್ತು. ಆದರೀಗ ಅನರ್ಹ ಶಾಸಕ ಸುಧಾಕರ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಈ ಮೂಲಕ ಜಿಲ್ಲೆಯ ರಾಜಕೀಯ ಚಿತ್ರಣ ಸಂಪೂರ್ಣ ಏರುಪೇರಾಗಿದೆ.
ಕ್ಷೇತ್ರದಲ್ಲಿ ಕಮಲ ಅರಳಿಸಲೇ ಬೇಕೆಂದು ಪಟ್ಟು ಹಿಡಿದು ಬಿರುಸಿನ ಪ್ರಚಾರವನ್ನು ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ತನ್ನ ವಿರೋಧ ಪಕ್ಷಗಳ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಒಂದು ಕಡೆ ಸಮ್ಮಿಶ್ರ ಸರ್ಕಾರ ಬಗ್ಗೆ ವಾಗ್ದಾಳಿ ನಡೆಸುತ್ತಿರುವ ಸುಧಾಕರ್ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡದ ಕಾರಣ ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದು, ಜಿಲ್ಲೆಗೆ ಮೆಡಿಕಲ್ ಕಾಲೇಜು,ನಿವೇಶನಗಳ ಹಂಚಿಕೆ, ಬಿಜೆಪಿ ಪಕ್ಷದ ಮೂರು ತಿಂಗಳ ಸಾಧನೆಗಳ ಕುರಿತು ಹೇಳುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಪಕ್ಷವು ಅನರ್ಹ ಶಾಸಕನನ್ನು ಸೋಲಿಸಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ನಗರದ ಸಿವಿವಿ ಕ್ಯಾಂಪಸ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಗ್ರಾಮಗಳಲ್ಲಿ ಮತದಾರರನ್ನು ಸೆಳೆಯಲು ಸಭೆಯನ್ನು ನಡೆಸಿ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ದ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಲೂಟಿ ಮಾಡಿ ಬಾಡಿಗೆ ಮನೆಯಲ್ಲಿದ್ದ ಅನರ್ಹ ಶಾಸಕನೀಗ ಸಾವಿರಾರು ಕೋಟಿಗಳಿಗೆ ಒಡೆಯನಾಗಿದ್ದಾನೆ ಎಂದು ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಅನರ್ಹ ಶಾಸಕ ಸುಧಾಕರ್ ಐಟಿ ದಾಳಿಯಿಂದ ತಪ್ಪಿಸಿಕೊಳ್ಳುಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ತಾಯಿಯಂತ ಪಕ್ಷಕ್ಕೆ ದ್ರೋಹ ಬಗೆದು, ತಂದೆಯಂತ ಕ್ಷೇತ್ರದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆಂದು ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.