ಚಿಂತಾಮಣಿ (ಚಿಕ್ಕಬಳ್ಳಾಪುರ): ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ ನೌಕರರ ಸಂಘದ ಪದಾಧಿಕಾರಿಗಳು ಕ್ಷೇತ್ರದ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಯಾವುದೇ ಸೌಲಭ್ಯಗಳಿಲ್ಲದೆ ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಮೃತಪಟ್ಟರೆ ₹50 ಲಕ್ಷ ಪರಿಹಾರ, ಕೋವಿಡ್ ಪರಿಹಾರ, ಭತ್ಯೆ, ಭೋನಸ್, ಮಕ್ಕಳಿಗೆ ಸರ್ಕಾರಿ ಉದ್ಯೋಗ, ಶೇ. 20ರಷ್ಟು ಹಾಸಿಗೆ ಮೀಸಲು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ಮಾಡಲಾಗಿದೆ.
ಆದರೂ ಕೂಡ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈವರೆಗೆ ಭರವಸೆಗಳು ಈಡೇರದೆ ಭರವಸೆಯಾಗೇ ಉಳಿದಿವೆ. ಹೀಗಾಗಿ, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕ ಜೆ ಕೆ ಕೃಷ್ಣಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.