ಚಿಕ್ಕಬಳ್ಳಾಪುರ: ಆಯುಕ್ತರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ನಗರಸಭೆ ಸದಸ್ಯರು ಚರಂಡಿಯಲ್ಲಿ ಕೂತು ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ನಗರಸಭೆಯ ಆಯುಕ್ತರಾದ ಚಲಪತಿ ಅವರ ವಿರುದ್ಧ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿರುವ ಆರೋಪ ಕೇಳಿ ಬರುತ್ತಿದ್ದು, ಇಂತಹ ಅಧಿಕಾರಿಯನ್ನು ತೊಲಗಿಸುವಂತೆ ನಗರಸಭೆ ಸದಸ್ಯರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಕೂಡಲೇ ಆಯುಕ್ತ ಸ್ಥಾನದಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಉಲ್ಲೂರು ಪೇಟೆ ಬಳಿಯಿರುವ ಬೃಹತ್ ಮೋರಿಯೊಳಗೆ ಕುಳಿತು ನಗರಸಭೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಅವರು ಆಯುಕ್ತರಾದಗಿನಿಂದ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ಮಾಡಿಲ್ಲ. ಇಲ್ಲಿರುವಂತಹ ಮೋರಿಗಳಲ್ಲಿ ಕಸ ತುಂಬಿ ಹೋಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಿಡಿ ರೇಣುಕಾ ಭೇಟಿ ನೀಡಿದ್ದು, ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಸದಸ್ಯರು ಮನವಿ ಮಾಡಿಕೊಂಡರು. ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದರು.