ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, 25 ಸಾವಿರ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಕಲಾಸಿಪಾಳ್ಯ ಠಾಣೆ ಪೇದೆ ಕೊರೊನಾದಿಂದ ಇಂದು ಬೆಳಿಗ್ಗೆ 7:15ಕ್ಕೆ ಕೊನೆಯುಸಿರೆಳೆದಿದ್ದಾರೆ. ಒಬಿಸಿಟಿ, ಅಸ್ತಮಾ, ಸಕ್ಕರೆ ಕಾಯಿಲೆ, ಬಹಳ ದಪ್ಪ ಸಹ ಇದ್ರು. 18ನೇ ತಾರೀಖು ಆಸ್ಪತ್ರೆಗೆ ದಾಖಲಿಸಿದಾಗ ನ್ಯುಮೋನಿಯಾ ಸಹ ಇತ್ತು. ಸದ್ಯ ಪೇದೆ ಕುಟುಂಬಕ್ಕೆ 50 ಲಕ್ಷ ರೂಪಾಯಿ ತಕ್ಷಣ ಕೊಡಲಾಗುವುದು. ಇದರಿಂದಾಗಿ ಯಾರೂ ಧೃತಿಗೆಡಬೇಡಿ. ಕೊರೊನಾ ಯೋಧರು, ಪೊಲೀಸರು, ಗಡಿಯಲ್ಲಿನ ಯೋಧರ ರೀತಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡ್ತಿದಾರೆ ಎಂದರು.
ವಿದ್ಯಾರ್ಥಿಗೆ ಕೊರೊನಾ ಸೋಂಕು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ನನಗಂತೂ ಗೊತ್ತಿಲ್ಲ. ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಲ್ಲಿ ಬಂದಿದೆ ಅಂತ ನೀವೇ ಹೇಳಿ ಎಂದು ಪ್ರಶ್ನೆ ಮಾಡಿದರು.
ಪರೀಕ್ಷೆಯಲ್ಲಿ ಒಂದು ಬೆಂಚ್ಗೆ ಒಬ್ಬರನ್ನ ಕೂರಿಸಲಾಗ್ತಿದೆ. ಮಾಸ್ಕ್ ಸೇರಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಮೇಲೆ ಹೇಗೆ ಬರುತ್ತೆ? ಜೀವ ಉಳಿಸಿಕೊಳ್ಳುವ ಜೊತೆಗೆ ಜೀವನವನ್ನೂ ಸಾಗಿಸಬೇಕಲ್ಲ. ಅಲ್ಲದೆ ನಾಳೆ ಪರೀಕ್ಷೆ ಆಗಲೇಬೇಕಲ್ಲ. ಸುರೇಶ್ ಕುಮಾರ್ ಅವರು ಯುವಕರ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಒಳ್ಳೆ ರೀತಿ ಕೆಲಸ ಮಾಡ್ತಿದಾರೆ. ಇದಕ್ಕೆ ಕೆಲವೇ ಕೆಲವು ವ್ಯಕ್ತಿ, ಸಂಘಟನೆಗಳು ವಿರೋಧ ಮಾಡ್ತಿದಾರೆ. ಇದರ ಹಿಂದಿನ ತರ್ಕ ಏನಿದೆ ಅಂತ ನನಗೆ ಗೊತ್ತಾಗ್ತಾ ಇಲ್ಲ. ಪರೀಕ್ಷೆ ಬೇಡ ಅನ್ನೋ ಹಾಗಿದ್ರೆ ಇನ್ಮುಂದೆ ಯಾವ ಚಟುವಟಿಕೆಗಳನ್ನೂ ಮಾಡೋ ಹಾಗೇ ಇಲ್ಲ. ಎಲ್ಲಾ ಚಟುವಟಿಕೆಗಳು ಪ್ರಾರಂಭ ಆಗಿವೆ. ಬಸ್, ಆಟೋ, ಕ್ರೀಡಾಂಗಣ, ಮಾಲ್ಗಳಿಗೆ ಹೋಗಬಹುದು. ಆದ್ರೆ ಪರೀಕ್ಷೆಯಲ್ಲಿ ಮಾತ್ರ ಕೂರಬಾರದು ಅಂದ್ರೆ ಎಷ್ಟು ಸರಿ ಎಂದು ಪರೋಕ್ಷವಾಗಿ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ್ದಾರೆ.
ಕೊರೊನಾ ಸೋಂಕಿತರ ಬಗ್ಗೆ ಉತ್ತರಿಸಿದ ಅವರು, ಇನ್ನೂ 35 ಕೊರೊನಾ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರಿನಲ್ಲಿ ಕೊರೊನಾಗೆ ಇನ್ನೂ ಬಲಿಗಳಾಗಲಿವೆ ಎಂದು ಸೂಚನೆ ನೀಡಿದ್ರು. ಐಸಿಯು, ವೆಂಟಿಲೇಟರ್ ಮೇಲೆ ಬಂದ್ರೆ ಸ್ವಲ್ಪ ಕಷ್ಟ. ಸದ್ಯ ಐಸಿಯು ಮತ್ತು ವೆಂಟಿಲೇಟರ್ನಲ್ಲಿ ಇನ್ನೂ 35 ಸೋಂಕಿತರು ಇದಾರೆ. 36ರಲ್ಲಿ ನಿನ್ನೆ ಒಂದು ಸಾವು ಆಗಿದೆ. ನಾನು ಸಹ ಟೆಲಿಐಸಿಯು ಮೂಲಕ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ಐಸಿಯು, ವೆಂಟಿಲೇಟರ್ನಲ್ಲಿ ಇರುವವರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಅವರನ್ನ ಉಳಿಸಿಕೊಳ್ಳಲು ಎಲ್ಲಾ ರಿತ್ಯ ಪ್ರಯತ್ನ ಮಾಡ್ತಿದ್ದೇವೆ. ನಮಗೆ ಮೀರಿದ ಒಂದು ಶಕ್ತಿ ಇದೆ. ನೋಡೋಣ ಏನಾಗುತ್ತೋ ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರು ದಿನೇ ದಿನೆ ಸಾವನ್ನಪ್ಪುತ್ತಿದ್ದು, ನನಗೂ ಆತಂಕ ಇದೆ. ಗುಣಮುಖ ಆಗ್ತಿರೋರ ಪ್ರಮಾಣ ಸಹ ಜಾಸ್ತಿ ಇದೆ. 60% ಗುಣಮುಖ ಆಗಿದೆ. ಸಕ್ರಿಯ ಸೋಂಕಿತರ ಸಂಖ್ಯೆ 3000 ಸಾವಿರ ದಾಟಿಲ್ಲ. ರೋಗ ತೀವ್ರರಾದವರ ಸಂಖ್ಯೆ ಹೆಚ್ಚಾಗ್ತಾ ಇದೆ. ಕೋವಿಡ್ ಕೇರ್ ಸೆಂಟರ್ ಜಾಗ ಗುರುತಿಸಲಾಗಿದೆ. ಒಂದು ತಿಂಗಳಲ್ಲಿ 25 ಸಾವಿರ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಲಿದೆ ಎಂದರು.