ಕೊಳ್ಳೇಗಾಲ: ಜೂಜು ಎಂದರೆ ಮನೆ, ಜಮೀನು ಮಾರಿಕೊಂಡರೂ ಅದರ ಚಟ ಹೋಗಲ್ಲ ಎಂಬುದಕ್ಕೆ ಈ ಯುವಕ ತಾಜಾ ಉದಾಹರಣೆ. ಜೂಜಾಡಲು ಕಂಡಕಂಡಳ್ಳಿ ಬೈಕ್ಗಳನ್ನು ಕದಿಯುತ್ತಿದ್ದ ಯುವಕನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದ ಪ್ರದೀಪ್ ಕುಮಾರ್(35) ಎಂದು ಗುರುತಿಸಲಾಗಿದೆ.
ಈತ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಕಳೆದ 6 ತಿಂಗಳುಗಳಿಂದ ಆನ್ ಲೈನ್ ಜೂಜಾಟದ ಬಲೆಗೆ ಬಿದ್ದಿದ್ದ. ಮೊದ ಮೊದಲು ಮೋಜಿ ಗಾಗಿ ಆಟ ಆಡಿ, ಬಳಿಕ ಚಟ ಮಾಡಿಕೊಂಡಿದ್ದ. ಬಳಿಕ ಜೂಜಾಟಕ್ಕೆ ಹಣಸಿಗದಿರುವುದರಿಂದ ಕಳವಿನ ಮಾರ್ಗ ಕಂಡುಕೊಂಡಿದ್ದ.
ಬೇಕಾಬಿಟ್ಟಿ ಬೈಕ್ ನಿಲ್ಲಿಸಿ ತೆರಳುವ ಬೈಕ್ಗಳನ್ನು ಕಳವು ಮಾಡುತ್ತಿದ್ದ ಪ್ರದೀಪ್, ಕಳೆದ ಎರಡೂವರೆ ತಿಂಗಳುಗಳಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಒಟ್ಟು ಮೂರು ಬೈಕ್, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಎರಡು ಬೈಕ್ ಹಾಗೂ ನಂಜನಗೂಡು ಪಟ್ಟಣದಲ್ಲಿ ಎರಡು ಬೈಕ್ ಕದ್ದು ಮಾರಾಟ ಮಾಡಿ, ಬಂದ ದುಡ್ಡಿನಲ್ಲೂ ಜೂಜಾಟ ಆಡಿ ಹಣವನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಕೊಳ್ಳೇಗಾಲ ಪೊಲೀಸರ ವಿಶೇಷ ತಂಡ ರಚಿಸಿ, ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದಾರೆ. ಮಾರಾಟ ಮಾಡಿದ್ದ ಅಷ್ಟೂ ಬೈಕ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬೈಕ್ ಕಳವು ಸಂಬಂಧ ಕೊಳ್ಳೇಗಾಲದಲ್ಲಿ ಮೂರು, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಎರಡು ಹಾಗೂ ನಂಜನಗೂಡು ಪಟ್ಟಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಓದಿ : ಇದೆಂಥಾ ತನಿಖೆ.. ಪಂಜಾಬ್ನಲ್ಲಿ ಎರಡೂವರೆ ವರ್ಷದ ಹಿಂದೆ ಸತ್ತ ವ್ಯಕ್ತಿಯ ವಿರುದ್ಧ ಈಗ ಡ್ರಗ್ಸ್ ಕೇಸ್!