ಚಾಮರಾಜನಗರ: ಆ್ಯಂಬುಲೆನ್ಸ್ನಲ್ಲೇ ಸೋಲಿಗ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ-ಪಾಲಾರ್ ಮಾರ್ಗದಲ್ಲಿನ ಕಾವೇರಿ ನೀರು ಸರಬರಾಜಿನ ಪಂಪ್‍ಹೌಸ್ ಬಳಿ ನಡೆದಿದೆ.
ಹನೂರು ತಾಲೂಕಿನ ತುಳಸಿಕೆರೆ ಗ್ರಾಮದ ಬೊಮ್ಮ ಎಂಬುವರ ಪತ್ನಿ ಕುಮಾರಿ (21) ಆ್ಯಂಬುಲೆನ್ಸ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕುಮಾರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಮಲೆ ಮಹದೇಶ್ವರ ಬೆಟ್ಟಕ್ಕೆ ವಾಹನದಲ್ಲಿ ಕರೆ ತಂದಿದ್ದರು. ಈ ವೇಳೆ ಹೆಚ್ಚಿನ ಹೆರಿಗೆ ನೋವು ಕಾಣಿಸಿಕೊಂಡ ಕಾರಣ 108 ವಾಹನದ ಸಿಬ್ಬಂದಿ ಸಂಪರ್ಕಿಸಿ ಆ್ಯಂಬುಲೆನ್ಸ್ ಮೂಲಕ ಮೆಟ್ಟೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ನೀರು ಸರಬರಾಜಾಗುವ ಪಂಪ್‍ಹೌಸ್ ಬಳಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅಂಬ್ಯುಲೆನ್ಸ್ ಸಿಬ್ಬಂದಿ ಪಂದಯ್ಯ, ಚಾಲಕ ಲಿಂಗರಾಜು ಅವರಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ತಾಯಿ-ಮಗುವನ್ನು ದಾಖಲು ಮಾಡಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಾಹನ ಸಿಬ್ಬಂದಿ ತಿಳಿಸಿದ್ದಾರೆ.