ಚಾಮರಾಜನಗರ: ಕೇವಲ ಐದೇ ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರೂ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, ನಾಲ್ಕು ವರ್ಷದ ಬಾಲಕಿ ಹೆತ್ತವರನ್ನ ಕಳೆದುಕೊಂಡು ಅನಾಥವಾಗಿದ್ದಾಳೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಗುರು ಎಂಬವರಿಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆರೋಗ್ಯ ತೀವ್ರ ಹದಗೆಟ್ಟು ಮೇ 5ರಂದು ಅಸುನೀಗಿದ್ದರು. ಇವರ ಪತ್ನಿ ರಶ್ಮಿಗೂ ಸೋಂಕು ಅಂಟಿದ್ದು, ಮೇ 9ರಂದು (ನಿನ್ನೆ) ಇವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮಹಾಮಾರಿ ಕೊರೊನಾಗೆ ತಂದೆ-ಮಗ ಬಲಿ
ಗುರು ಅವರಿಗೆ ತಂದೆ-ತಾಯಿ, ಒಡಹುಟ್ಟಿದವರೂ ಯಾರೂ ಇಲ್ಲ. ರಶ್ಮಿ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ವೈರಸ್ ತಗುಲಿದ ವಿಚಾರ ತಿಳಿದು ಕೊತ್ತಲವಾಡಿ ಗ್ರಾಮಕ್ಕೆ ಬಂದು ಆರೈಕೆ ಮಾಡಿದ್ದ ರಶ್ಮಿ ಅವರ ತಂದೆ-ತಾಯಿಗೂ ಈಗ ಕೋವಿಡ್ ದೃಢಪಟ್ಟಿದೆ. ಇದೀಗ ರಶ್ಮಿ ಅವರ ತಂಗಿ ಮನೆಯಲ್ಲಿ ಬಾಲಕನನ್ನು ಇರಿಸಿಕೊಳ್ಳಲಾಗಿದೆ. ಈ ದುರಂತ ಕಂಡು ಇಡೀ ಗ್ರಾಮವೇ ಕಣ್ಣೀರಿಟ್ಟಿದೆ.