ಚಾಮರಾಜನಗರ: ಜಿಲ್ಲೆಯ ರೈತರಿಗೆ ಕಾಡುಹಂದಿಗಳು ಅಕ್ಷರಶಃ ಬೆಳೆ ಬಕಾಸುರಗಳಾಗಿದ್ದು ಏನೇ ಮಾಡಿದರೂ ಹಂದಿಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯು ಅರಣ್ಯ ಪ್ರದೇಶವನ್ನೇ ಹೆಚ್ಚು ಒಳಗೊಂಡಿದ್ದರೂ ಆನೆಗಳಿಗಿಂತ ಹಂದಿಗಳೇ ಬೆಳೆನಾಶಕಗಳಾಗಿ ಪರಿಣಮಿಸಿದೆ. ಆನೆಗಳಿಂದ ಬೆಳೆ ಹಾನಿ, ಪ್ರಾಣಹಾನಿಯಾದರೆ ಸಿಗುವ ಪರಿಹಾರವೂ ಕಾಡುಹಂದಿಗಳ ಪ್ರಕರಣದಲ್ಲಿ ಸಿಗುವುದಿಲ್ಲ. ಸಾಲ ಮಾಡಿ ಹಸಿರು ಬಲೆ, ಸೋಲಾರ್ ಬೇಲಿ, ಮುಳ್ಳುತಂತಿ ಹಾಕಿದ್ದರೂ ನೆಲ ತೋಡಿ ನುಸುಳಿ ಜೋಳ, ಕಡಲೆ, ಹುರುಳಿಯನ್ನು ತಿಂದಡಗಿಸುತ್ತಿವೆ. ಬಾಟಲಿ ಕಟ್ಟುವುದು, ತಮಟೆ ಬಡಿಯುವುದು, ಪಟಾಕಿ ಸಿಡಿಸುವುದು ಉಪಯೋಗಕ್ಕೆ ಬರುತ್ತಿಲ್ಲ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಕಳೆದ ಆಗಸ್ಟ್ ವರೆಗಿನ ಅಂಕಿ ಅಂಶದಂತೆ ಆನೆದಾಳಿಯಿಂದ ಚಾಮರಾಜನಗರದಲ್ಲಿ(ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೊರತುಪಡಿಸಿ) ಒಟ್ಟು 654 ಪ್ರಕರಣ ದಾಖಲಾಗಿದೆ. ಇವುಗಳಲ್ಲಿ ಬಿಆರ್ ಟಿ 141, ಕಾವೇರಿ ವನ್ಯಜೀವಿ ಧಾಮದಲ್ಲಿ 377 ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ 136 ಬೆಳೆಹಾನಿ ಕೇಸ್ ದಾಖಲಾಗಿದ್ದು 38.60 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಆನೆಯಿಂದ ಬೆಳೆ ಹಾನಿಯಾಗುವುದಕ್ಕಿಂತ ಕಾಡುಹಂದಿಗಳಿಂದಲೇ ಹೆಚ್ಚಾಗುತ್ತಿದ್ದು ಒಮ್ಮೆಗೆ ನೂರಾರು ಹಂದಿಗಳು ದಾಳಿಯಿಟ್ಟು ಬೆಳೆ, ಗೊಬ್ಬರ ತಿನ್ನುತ್ತಿವೆ. ಅರಣ್ಯ ಇಲಾಖೆ ಕಳೆದ ವರ್ಷ ಪರವಾನಗಿ ಬಂದೂಕುಗಳಿಂದ ಹಂದಿಗಳನ್ನು ಕೊಲ್ಲಬಹುದು ಆದರೆ ಗರ್ಭಿಣಿ, ಮರಿಗಳನ್ನು ಕೊಲ್ಲುವಂತಿಲ್ಲ, ಕೊಂದ ಹಂದಿಗಳನ್ನು ಅರಣ್ಯ ಇಲಾಖೆ ಗಮನಕ್ಕೆ ತಂದು ಮಣ್ಣು ಮಾಡಬೇಕೆಂಬ ಅವೈಜ್ಞಾನಿಕ ನಿರ್ಧಾರ ಪ್ರಕಟಿಸಿತ್ತು. ರಾತ್ರಿ ವೇಳೆ ನೂರಾರು ಹಂದಿಗಳು ಬಂದಾಗ ಮರಿ, ಗರ್ಭಿಣಿಯೆಂದು ಹುಡುಕಲು ಸಾಧ್ಯವೇ..!? ಹಂದಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಕಾಡುಹಂದಿಗಳಿಂದಾಗುತ್ತಿರುವ ಬೆಳೆಹಾನಿಗೂ ಪರಿಹಾರ ನೀಡಬೇಕೆಂದು ರೈತಸಂಘದ ಮುಖಂಡ ಡಾ.ಗುರುಪ್ರಸಾದ್ ಒತ್ತಾಯಿಸಿದ್ದಾರೆ.
ಸದ್ದು ಮಾಡುವುದೇ ಮದ್ದು: ಕಾಡುಹಂದಿಗಳ ಹಾವಳಿ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಪ್ರತಿಕ್ರಿಯಿಸಿ, ರಾತ್ರಿ ವೇಳೆ ರೈತರು ಸದ್ದು ಮಾಡುವುದೇ ಹಂದಿಗಳ ನಿಯಂತ್ರಣಕ್ಕೆ ಮದ್ದಾಗಿದೆ. ಹೆಚ್ಚು ಶಬ್ಧ ಮಾಡದಿದ್ದರೇ ಬೆಳೆ ಹಾಳು ಮಾಡುತ್ತವೆ. ವಾಡಿಕೆಗಿಂತ ಹೆಚ್ಚು ಮಳೆ ಬಂದು ಬೆಳೆ ಕೂಡ ಚೆನ್ನಾಗಿ ಬಂದಿದ್ದು ವಿನೂತನ ಮಾರ್ಗಗಳ ಮೂಲಕ ಸದ್ದು ಮಾಡಿ ಓಡಿಸಬೇಕಿದೆ. ಕೃಷಿ ಇಲಾಖೆಯು ವಿಭಿನ್ನ ಐಡಿಯಾಗಳ ಮೂಲಕ ಕಾಡುಹಂದಿ ತಡೆಗೆ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಇನ್ನು, ಕಾಡುಹಂದಿಗಳ ಜೊತೆಗೆ ಇತ್ತೀಚೆಗೆ ಜಿಂಕೆ, ಕೃಷ್ಣಮೃಗಗಳು ಕೆಲವೆಡೆ ಕೂಡ ಬೆಳೆ ತಿನ್ನುತ್ತಿರುವುದು ರೈತರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ವರುಣನ ಕೃಪೆಗೆ ಉತ್ತಮವಾಗಿ ಬೆಳೆ ಬಂದರೂ ಕೈಗೆ ಸೇರದಂತೆ ಪ್ರಾಣಿಗಳು ಮಾಡುತ್ತಿವೆ ಎನ್ನುವುದು ರೈತರ ಅಳಲಾಗಿದೆ.