ಚಾಮರಾಜನಗರ: ಕೇವಲ ರಾತ್ರಿ ವೇಳೆಯಲ್ಲಿ ಕಾಣಬಹುದಾಗಿದ್ದ ಆನೆಗಳ ಹಿಂಡು, ಮರ ಇಲ್ಲವೇ ತಡೆಗೋಡೆ ಮೇಲೆ ಕೂರುತ್ತಿದ್ದ ಚಿರತೆಗಳು, ಅಡ್ಡಾದಿಡ್ಡಿ ಸಿಗುತ್ತಿದ್ದ ಕಾಡು ಹಂದಿಗಳು ಇದೀಗ ಮಟ - ಮಟ ಮಧ್ಯಾಹ್ನವೇ ದರ್ಶನ ನೀಡುತ್ತಿವೆ. ಇಂತಹ ದೃಶ್ಯಗಳಿಗೆ ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಸಾಕ್ಷಿಯಾಗುತ್ತಿದೆ.
ತಮಿಳುನಾಡಿನಲ್ಲಿ ಕೊರೊನಾ ತಹಬದಿಗೆ ಬಾರದ ಕಾರಣ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲೂ ಇಳಿಮುಖ ಆಗಿರುವುದರಿಂದ ಖಾಲಿ ಖಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ನಿರ್ಭೀತಿಯಿಂದ ದರ್ಬಾರ್ ನಡೆಸುತ್ತಿವೆ. ಕಳೆದ ಸೋಮವಾರವಂತೂ 8ಕ್ಕೂ ಹೆಚ್ಚು ಆನೆಗಳು 2 ಕಿಮೀ ತನಕ ರಸ್ತೆಯಲ್ಲೇ ನಡೆದು ಹೋಗಿವೆ. ರಾಜ್ಯದ ಗಡಿಭಾಗವಾದ ಅಸನೂರು ಸಮೀಪ ರಸ್ತೆಗೆ ಅಂಟಿಕೊಂಡಂತೆ ಇರುವ ಮರವೊಂದರ ಮೇಲೆ ಚಿರತೆ ಒಂದೂವರೆ ತಾಸಿಗೂ ಹೆಚ್ಚು ಕಾಲ ರಾಜನಂತೆ ಕುಳಿತು ಗಾಂಭೀರ್ಯತೆ ಪ್ರದರ್ಶಿಸಿದೆ. ಕಾಡು ಹಂದಿಗಳ ಹಾವಳಿ ಈಗ ಜಮೀನಿಗಿಂತ ರಸ್ತೆಯಲ್ಲೇ ಹೆಚ್ಚಾಗಿದೆ.
ಆಸನೂರು ಚೆಕ್ ಪೋಸ್ಟ್ ಸಿಬ್ಬಂದಿ ಕಂದಸ್ವಾಮಿ ಎಂಬುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ಪ್ರಾಣಿಗಳಿಗೆ ಇದೀಗ ನಿಜಾರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಅವುಗಳ ಸ್ಥಳದಲ್ಲಿ ಅವು ಸ್ವಚ್ಚಂದವಾಗಿ ವಿಹರಿಸುತ್ತಿವೆ. ಮಳೆಯೂ ಆಗುತ್ತಿರುವುದರಿಂದ ರಸ್ತೆಯಲ್ಲೇ ಆನೆಗಳು ಬಿಡಾರ ಹೂಡುತ್ತಿವೆ. ಚಿರತೆ, ಕಾಡೆಮ್ಮೆ, ಜಿಂಕೆಗಳ ದರ್ಶನವೀಗ ತೀರಾ ಸಾಮಾನ್ಯ ಎನ್ನುವಂತಾಗಿದೆ ಎಂದರು.