ಚಾಮರಾಜನಗರ: ಪಶ್ಚಿಮ ಬಂಗಾಳದ ಪ್ರವಾಸಿಗರಿದ್ದ ಬಸ್ ಪಲ್ಟಿಯಾಗಿ 25 ಮಂದಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಇಳಿಜಾರಿನಲ್ಲಿ ಮಂಗಳವಾರ ಸಂಭವಿಸಿತು. ತಮಿಳುನಾಡಿನ ತೀರ್ಥಕ್ಷೇತ್ರಗಳನ್ನು ನೋಡಿಕೊಂಡು ಬಂಡೀಪುರ ಮಾರ್ಗವಾಗಿ ಕರ್ನಾಟಕಕ್ಕೆ ಬರುತ್ತಿದ್ದಾಗ ಇಳಿಜಾರಿನ ರಸ್ತೆಯಲ್ಲಿ ಬ್ರೇಕ್ ಫೆಲ್ಯೂರ್ ಆಗಿ ಅವಘಡ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಡುಗೆ ಸಿಬ್ಬಂದಿ ಸೇರಿದಂತೆ 65 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. 25 ಮಂದಿ ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಬಹುಪಾಲು ಮಂದಿ ಹಾಗೂ ಗಾಯಗೊಂಡ ಅನೇಕರು ಹಿರಿಯ ನಾಗರಿಕರಾಗಿದ್ದಾರೆ. ಗಾಯಾಳುಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೀತಿಸು ಪ್ರೀತಿಸು ಎಂದು ಕಿಡಿಗೇಡಿ ಪ್ರೇಮಿಯೊಬ್ಬ ಪೀಡಿಸುತ್ತಿದ್ದರಿಂದ ತೀವ್ರವಾಗಿ ಮನನೊಂದು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಣಕಣಪುರ ಗ್ರಾಮದಲ್ಲಿ ನಡೆದಿದೆ. ಹೊಣಕಣಪುರ ಗ್ರಾಮದ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟವರು. ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಶ್ರೀನಿ ಎಂಬಾತ ವಿದ್ಯಾರ್ಥಿನಿಯನ್ನು ಹಿಂಬಾಲಿಸುವುದು, ಆಕೆಯ ಮೊಬೈಲ್ಗೆ ಸಂದೇಶ ಕಳುಹಿಸುವುದು, ಪ್ರೀತಿಸು ಎಂದು ಪೀಡಿಸುತ್ತಿದ್ದ ಎಂದು ಮೃತಳ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತಪಟ್ಟ ಬಾಲಕಿ ನಂಜನಗೂಡಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೇಗೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನದಿಯಲ್ಲಿ ಮುಳುಗಿ ಬಾಲಕ ಸಾವು: ನದಿಯಲ್ಲಿ ಈಜಲು ಹೋಗಿದ್ದ 17 ವರ್ಷದ ಬಾಲಕ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ. ಮೃತನನ್ನು ಅಮೋಘ ಹೊಸಮನಿ ಎಂದು ಗುರುತಿಸಲಾಗಿದೆ. ವರದಾ ನದಿಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ಬಂದಿದ್ದಾಗ ದುರ್ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಾವೇರಿ ಮತ್ತು ಸವಣೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಪತ್ನಿ ಕೊಲೆಗೈದ ಪತಿ, 10 ತಿಂಗಳ ಮಗು ಅನಾಥ