ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಇನ್ನಿತರ ದೇಗುಲಗಳಿಗೆ ಮಾದರಿಯಾಗಿದೆ.
ಹೌದು, ದೇಗುಲಗಳಿಗೆ ಹರಿದುಬರುವ ಲಕ್ಷಾಂತರ ಭಕ್ತರು ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳು, ಹಸಿ ಕಸವನ್ನು ವಿಂಗಡಿಸಿ ವಾತವರಣದ ನೈರ್ಮಲ್ಯ ಕಾಪಾಡುವ ಜೊತೆಗೆ ಕಿರು ಆದಾಯದ ಮೂಲವನ್ನು ನೋ ಪ್ರಾಫಿಟ್- ನೋ ಲಾಸ್ ಪರಿಕಲ್ಪನೆಯಲ್ಲಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಮಾಡಿಕೊಂಡಿದೆ.
2017ರಲ್ಲಿ ಭೋಜನಾ ಶಾಲೆಯ ಕೆಲವು ಮೀ.ದೂರದಲ್ಲಿ ಅಂದಾಜು 57 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ತ್ಯಾಜ್ಯ ವಿಲೇವಾರಿ ಘಟಕದಿಂದ ತಿಂಗಳಿಗೆ ಸರಾಸರಿ 20-30 ಟನ್ ಗೊಬ್ಬರ ಬರುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಎಇಇ ಎಚ್.ಕುಮಾರ್.
ಒಣಕಸಗಳಾದ ಬಾಟಲಿಗಳು, ನಂದಿನಿ ಹಾಲಿನ ಪ್ಯಾಕೇಟ್ಗಳನ್ನು ಕ್ರಷರ್ನಿಂದ ಬ್ರಿಕ್ಸ್ಗಳನ್ನಾಗಿ ಮಾಡಿದ್ದು, ಹರಾಜು ನಡೆಸಬೇಕಿದೆ. ಹಸಿ ಕಸದಿಂದ ಉತ್ಪಾದಿಸುವ ಗೊಬ್ಬರವನ್ನು ಬೆಟ್ಟದಲ್ಲಿರುವ ತೆಂಗಿನ ತೋಟ, 200 ಕ್ಕೂ ಹೆಚ್ಚಿರುವ ಬಿಲ್ವಪತ್ರೆ ಮರ, ಬಾಳೆ, ಸೀಬೆ, ಸೀತಾಫಲ ಸೇರಿದಂತೆ ಇನ್ನಿತರ ಗಿಡ-ಮರಗಕಳಿಗೆ ಉಪಯೋಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿಯಿತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರಿನ ದೇಗುಲವೊಂದು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧಿಕಾರಿಗಳು ಘಟಕದ ನೀಲನಕ್ಷೆ ಪಡೆದಿದ್ದಾರೆ. ಭಕ್ತಾಧಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ಇನ್ನು, ಒಣಕಸದ ಘಟಕದಲ್ಲಿ 6 ಮಂದಿ, ಹಸಿ ಕಸ ಘಟಕದಲ್ಲಿ 4 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕಸದಿಂದ ರಸ ತೆಗೆಯುವ ಕಾಯಕದಲ್ಲಿ ತೊಡಗಿದ್ದಾರೆ.
ದೇಗುಲದಲ್ಲಿ ಶಾಂತ ವಾತಾವರಣ ಮತ್ತು ಭಕ್ತಿ ಮೂಡಲು ವಾತಾವರಣವೂ ಚೆನ್ನಾಗಿರಬೇಕಿರುವುದರಿಂದ ಮಾದಪ್ಪನ ಬೆಟ್ಟ ಇನ್ನಿತರ ದೇಗುಲಗಳಿಗೆ ಮಾದರಿಯಾಗಿದೆ ಎಂಬುದು ಭಕ್ತಾಧಿಗಳ ಅಭಿಮತ.