ಚಾಮರಾಜನಗರ: ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಕಾಣಿಸಿಕೊಂಡಿದ್ದರಿಂದ ಡೋಲಿ ಕಟ್ಟಿಕೊಂಡು 8 ಕಿಲೋ ಮೀಟರ್ ಹೊತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ಹನೂರು ತಾಲೂಕಿನ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಾಣೆ ಗ್ರಾಮದ ಶಾಂತಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಯಾವುದೇ ಸಾರಿಗೆ ಸಂಪರ್ಕ ಲಭಿಸದೇ 8 ಕಿಲೋ ಮೀಟರ್ ದೂರದ ಮಾರ್ಟಳ್ಳಿ ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸಿದ್ದು, ಶಾಂತಲಾ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಡಿನೊಳಗೆ ಇರುವ ಗ್ರಾಮಗಳ ಸಂಪರ್ಕಕ್ಕಾಗಿ ಜನವನ ಸಾರಿಗೆ ಎಂದು ಜೀಪ್ಗಳನ್ನು ಒದಗಿಸಲಾಗಿದೆ. ಆದರೆ, ಜೀಪ್ ಚಾಲಕ, ಆ್ಯಂಬುಲೆನ್ಸ್ ಚಾಲಕನಿಗೆ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದ್ದರಿಂದ ಡೋಲಿ ಮೂಲಕವೇ ಗರ್ಭಿಣಿಯನ್ನು ಹೊತ್ತು ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಲೆ ಮಹದೇಶ್ವರಬೆಟ್ಟ ತಪ್ಪಲಿನ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯು 'ಜನವನ' ಸಾರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಅದು ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ತುರ್ತು ಬಳಕೆಗೆ ಇದ್ದೂ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮರ ಬಿದ್ದು ವ್ಯಕ್ತಿ ಸಾವು: ಪರಿಹಾರಕ್ಕಾಗಿ 6 ವರ್ಷದಿಂದ ಪಾಲಿಕೆ ಕಚೇರಿಗೆ ಕುಟುಂಬಸ್ಥರ ಅಲೆದಾಟ