ಚಾಮರಾಜನಗರ: ಸರ್ಕಾರಿ ನೌಕರಿ ಅಂದ್ರೆ 'ಗಂಟೆ ಹೊಡಿ ಸಂಬಳ ತಗೋ' ಎಂಬ ಮಾತಿಗೆ ಅಪವಾದವಾಗಿ ತನ್ನೂರು ಬಿಟ್ಟು ನೂರಾರು ಕಿ.ಮೀ ಬಂದು ನೆಲೆಸಿರುವ ಈ ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು, ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಅವರು ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ 6 ತಾಸು ಕೆಲಸವಷ್ಟೇ ಎಂಬ ಮನಸ್ಥಿತಿ ಹೊರಬಿಟ್ಟು ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಮುಂದಾಗಿದ್ದಾರೆ.
'ಚಾಮರಾಜನಗರ ದರ್ಶನಂ'ನಲ್ಲಿ 189 ಹಳ್ಳಿಗಳ ಚರಿತ್ರೆ: ಚಾಮರಾಜನಗರ ತಾಲೂಕಿನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಶ್ರೀಧರ್ ಮುಂದಾಗಿದ್ದು, ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.
ಊರಿಗೆ ಆ ಹೆಸರು ಯಾಕೆ ಬಂತು?, ಹಳೆಯ ಹೆಸರೇನು?, ಶಾಸನಗಳಲ್ಲಿ ಊರಿನ ಉಲ್ಲೇಖ, ಊರಲ್ಲಿರುವ ಮತದಾರರು, ಜನಸಂಖ್ಯೆ, ದೇವಾಲಯಗಳು, ದೇವಾಲಯಗಳ ಶೈಲಿ, ಗ್ರಾಮದ ಹಿರಿಯರ ಮಾತುಗಳು, ಊರಲ್ಲಿರುವ ಕೆರೆಗಳ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಡುತ್ತಿದ್ದಾರೆ.
ಕಳೆದ 6-8 ತಿಂಗಳುಗಳು ಕಾಲ ಚರಿತ್ರೆ ಬರೆಯಲು ಹಳ್ಳಿಗಳಿಗೆ ಎಡತಾಕಿ ಶಾಸನಗಳನ್ನು ಕಂಡು, ಎಫಿಗ್ರಾಪಿ ಕರ್ನಾಟಕವನ್ನು ಓದಿಕೊಂಡು ಈ ಇತಿಹಾಸ ಸಾರುವ ಪುಸ್ತಕವನ್ನು ಶ್ರೀಧರ್ ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಬ್ರಿಟಿಷರ ಲಾಠಿ ಕಿತ್ತು ಬಿಸಾಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ಇನ್ನಿಲ್ಲ