ಚಾಮರಾಜನಗರ: ಕಾಡುಗಳ್ಳ, ದಂತಚೋರನೆಂದೆ ಕರೆಸಿಕೊಂಡಿದ್ದ ವೀರಪ್ಪನ್ ಮಹಿಳೆಯರನ್ನು ಕಂಡರೆ ಕೆಂಡವಾಗುತ್ತಿದ್ದ ಎಂದು ಬಂಧಿಯಾಗಿರುವ ಆತನ ಸಹಚರನ ಪತ್ನಿ ಸ್ಟೆಲ್ಲಾ ಮೇರಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.
ಕೊಳ್ಳೇಗಾಲದ ಜಾಗೇರಿಯಲ್ಲಿ ಬಂಧಿಸಲ್ಪಟ್ಟ ವೀರಪ್ಪನ್ ಸಹಚರ ಸುಂಡ ಅಲಿಯಾಸ್ ವೆಲ್ಲಿಯನ್ ಪತ್ನಿ ಸ್ಟೆಲ್ಲಾಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆಕೆ, ವೀರಪ್ಪನ್ಗೆ ತನ್ನ ಗುಂಪಿನಲ್ಲಿದ್ದ ಮಹಿಳೆಯರನ್ನು ಅನುಮಾನದಿಂದ ಕಾಣುತ್ತಿದ್ದನು. ಅಡುಗೆ ಕೆಲಸ ಸೇರಿದಂತೆ ಇತರೆ ಕೆಲಸಗಳಿಗೂ ತನ್ನ ಸಹಚರರನ್ನೆ ನೇಮಿಸುತ್ತಿದ್ದ ಎಂದು ತಿಳಿಸಿದ್ದಾಳೆ.
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಕೂಡ ಕೆಲ ತಿಂಗಳು ಜೊತೆಗಿದ್ದು, ಗುಂಪಿನಲ್ಲಿದ್ದ ಮಹಿಳೆಯರಿಗೆ ಯಾವುದೇ ಕೆಲಸ ನಿಯೋಜಿಸಬೇಕಾದರೂ ಎರಡ್ಮೂರು ಬಾರಿ ಯೋಚಿಸುತ್ತಿದ್ದನು. ಅನಾರೋಗ್ಯಕ್ಕೀಡಾದರೆ ಆತನೆ ಔಷಧಿ, ಚುಚ್ಚುಮದ್ದು ನೀಡುತ್ತಿದ್ದನೆಂದು ಸ್ಟೆಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆಂದು ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಇನ್ನು, 13 ರ ಹರೆಯದಲ್ಲಿ ನರಹಂತಕನ ಗುಂಪು ಸೇರಿಕೊಂಡ ಸ್ಟೆಲ್ಲಾ ಪಾಲಾರ್ ಬಾಂಬ್ ಪ್ರಕರಣ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊತ್ತೊಯ್ದ ಆರೋಪ ಹೊತ್ತು ತಲೆಮರಿಸಿಕೊಂಡಿದ್ದಳು. 27 ವರ್ಷದ ಬಳಿಕ ಈಕೆಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ದಳ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.