ಚಾಮರಾಜನಗರ: ರಾಷ್ಟ್ರ ಜಾಗೃತಿ ಹಾಗೂ ಧರ್ಮ ಜಾಗೃತಿಗಾಗಿ ಯುವ ಬ್ರಿಗೇಡ್ ಸಂಸ್ಥೆಯು ಹಮ್ಮಿಕೊಂಡಿರುವ ವೀರ್ ಭಾರತ್- ಗುರಿಯತ್ತ ನಡೆ ಎಂಬ ಕಾರ್ಯಕ್ರಮ ಇಂದಿನಿಂದ ಪ್ರಾರಂಭಗೊಂಡಿದ್ದು, ಸಂಸ್ಥೆಯ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಜಿಲ್ಲೆಯ ಹಳ್ಳಿಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.
ಕನ್ಯಾಕುಮಾರಿಯಲ್ಲಿನ ಸ್ವಾಮಿ ವಿವೇಕಾನಂದ ಧ್ಯಾನಕೇಂದ್ರಕ್ಕೆ 50 ವರ್ಷವಾದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ 50 ಹಳ್ಳಿಗಳಿಗೆ ವಿವೇಕಾನಂದರ ವಿಚಾರಧಾರೆಗಳನ್ನು ತಲುಪಿಸುವ ಯೋಜನೆ ಹಾಕಿಕೊಂಡಿದ್ದು, ಸೂಲಿಬೆಲೆ ಅವರು ಇಂದಿನಿಂದ 3 ದಿನಗಳವರೆಗೆ ಪಾದಯಾತ್ರೆ ನಡೆಸಿ ಮೂರು ಗ್ರಾಮಗಳಲ್ಲಿ ಉಪನ್ಯಾಸ ನಡೆಸಲಿದ್ದಾರೆ.
ಇಂದು ಸಂಜೆ ಹರದನಹಳ್ಳಿಯಲ್ಲಿ ಉಪನ್ಯಾಸ ನಡೆಸಲಿರುವ ಸೂಲಿಬೆಲೆ 11 ಕ್ಕೆ ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ಹಾಗೂ 12ಕ್ಕೆ ಅಗರ ಗ್ರಾಮದಲ್ಲಿ ಸಮಾರೋಪ ಭಾಷಣ ಮಾಡಲಿದ್ದಾರೆ.
ಸೂಲಿಬೆಲೆ ತೆರಳುವ ಗ್ರಾಮಗಳಲ್ಲಿ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅವರ ಜೊತೆಗೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ.