ಚಾಮರಾಜನಗರ: ಕೋವಿಡ್-19 ವ್ಯಾಪಿಸುತ್ತಿದೆ ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ, ಬೇರೆ ಕೇಂದ್ರ ಸಚಿವರ ಸುಳಿವಿಲ್ಲ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೇಂದ್ರ ಸಚಿವರು ಕಾಣಿಸಿಕೊಳ್ಳುತ್ತಿಲ್ಲ, ಗೃಹ ಮಂತ್ರಿ ಅಮಿತ್ ಶಾ ಕಾಣುತ್ತಿಲ್ಲ. ಈ ಕುರಿತು ಪ್ರಧಾನಿ ಅವರೇ ಸ್ಪಷ್ಟಪಡಿಸಬೇಕು. ಕೊರೊನಾಗೆ ಸಂಬಂಧಿಸಿದಂತೆ ಗೃಹಮಂತ್ರಿಯವರದ್ದು ಜವಾಬ್ದಾರಿ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮೋದಿ ಅವರು ಮನೆಯಿಂದ ಹೊರಗಡೆ ಬರ್ಬೇಡಿ, ಮನೆ ಹೊರಗೆ ದೀಪ ಹಚ್ಚಿ ಎಂದು ಹೇಳಿದ್ದಾರೆ. ಹಗಲಿನ ಹೊತ್ತು ಮನೆಯಲ್ಲಿರುವ ಅಭ್ಯಾಸ ನನಗಿಲ್ಲ, ನಾನು ಇವತ್ತಿನವರೆಗೂ ಮನೆ ಸೇರಿಲ್ಲ ಎಂದು ಹೇಳಿದ ಅವರು ಇದೇ ವೇಳೆ ನಾನು ಮನೆ ಹೊರಗೆ ದೀಪ ಹಚ್ಚುವುದಿಲ್ಲ ಒಳಗೆ ಹಚ್ಚುತ್ತೇನೆಂದರು.
ಇನ್ನು ಜಿಲ್ಲೆ ಕೊರೊನಾ ಮುಕ್ತವಾಗಿದೆ. ವೈರಸ್ ಹರಡದಂತೆ ಕೇರಳ, ತಮಿಳುನಾಡು ಗಡಿಗಳನ್ನು ಸಂಪೂರ್ಣ ಬಂದ್ ಮಾಡಬೇಕು, ಏನೇ ಒತ್ತಡ ಬಂದರೂ ಕೇರಳದವರನ್ನು ಸೇರಿಸಬಾರದು ಎಂದು ಅವರು ಒತ್ತಾಯಿಸಿದರು.